
ಮೈಸೂರು, ಜುಲೈ 16: ಮೈಸೂರಿನ ಹೆಸರಾಂತ ಚೆಲುವಾಂಬ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಧಿ ಮುಗಿದ ಆಹಾರ ಪದಾರ್ಥಗಳಿಂದ ತಯಾರಿಸಿದ ಭೋಜನ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಹೊರಬಿದ್ದ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ಅಮಾನತು ಗೊಂಡವರಲ್ಲಿ ಆಸ್ಪತ್ರೆಯ ಲೀಲಾವತಿ ಮತ್ತು ಲಾರೆನ್ಸ್ ಎಂಬ ವೈದ್ಯರು ಇದ್ದಾರೆ. ಈ ನಿರ್ಧಾರವು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್. ಕೃಷ್ಣ ಅವರ ನೇತೃತ್ವದ ತನಿಖಾ ತಂಡದ ಪತ್ತೆಗಳಿಂದಾಗಿ ತೆಗೆದುಕೊಳ್ಳಲಾಗಿದೆ.
ಹುಳವಿರುವ ರವೆ, ಅವಲಕ್ಕಿ, ಕಡ್ಲೆಬೇಳೆ ಬಳಕೆ ಶಾಕ್ ನೀಡಿದ ಅನುಭವ
ಚೆಲುವಾಂಬ ಆಸ್ಪತ್ರೆಗೆ ಅಚ್ಚಾನೀಯ ಭೇಟಿ ನೀಡಿದ್ದ ಆಯೋಗದ ಅಧ್ಯಕ್ಷರು ಹಾಗೂ ಅವರ ತಂಡ, ಆಸ್ಪತ್ರೆಯ ಅಡುಗೆ ವಿಭಾಗವನ್ನು ಪರಿಶೀಲಿಸಿದಾಗ, ಹುಳ ಕಾಣಿಸಿಕೊಳ್ಳುವ ರವೆ, ಅವಧಿ ಮೀರಿದ ಅವಲಕ್ಕಿ ಮತ್ತು ಕಡ್ಲೆಬೇಳೆ ಸೇರಿದಂತೆ ಹಲವಾರು ಆಹಾರ ಪದಾರ್ಥಗಳು ಬಳಸಲ್ಪಟ್ಟಿರುವುದು ಬೆಳಕಿಗೆ ಬಂದಿದೆ. ರೋಗಿಗಳಿಗೆ ದಿನವೂ ಒಂದೆರೆಡು ಐಟಂಗಳನ್ನು ಮಾತ್ರ ನೀಡಲಾಗುತ್ತಿದ್ದು, ಪೋಷಕಾಂಶದ ಕೊರತೆ ಇದೆ ಎಂಬುದು ಸ್ಪಷ್ಟವಾಗಿದೆ.
ಸ್ಯಾಂಪಲ್ ಲ್ಯಾಬ್‌ಗೆ: ಇನ್ನಷ್ಟು ಸಿಬ್ಬಂದಿ ಮೇಲೆ ಕ್ರಮ ಸಾಧ್ಯತೆ
ಅವಧಿ ಮೀರಿದ ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಲಭ್ಯವಾದ ಬಳಿಕ ಇನ್ನಷ್ಟು ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಆಯೋಗದ ಅಧ್ಯಕ್ಷ ಡಾ. ಕೃಷ್ಣ ತಿಳಿಸಿದ್ದಾರೆ.
ಆಸ್ಪತ್ರೆ ಪರಿಸರ ಅಶುಚಿ – ಕುಡಿಯುವ ನೀರಿಗೂ ಕಡಿಮೆ ಆವಕಾಶ
ಅವರ ವರದಿಯಲ್ಲಿ ಚೆಲುವಾಂಬ ಆಸ್ಪತ್ರೆಯ ಸ್ವಚ್ಛತೆಯ ಕೊರತೆ, ಕುಡಿಯುವ ನೀರಿನ ಘಟಕದ ಅಭಾವ, ಹಾಗೂ ನಿರ್ವಹಣೆಯಲ್ಲಿನ ದೌರ್ಬಲ್ಯಗಳ ಬಗ್ಗೆ ಕಠಿಣ ಟೀಕೆ ವ್ಯಕ್ತಪಡಿಸಲಾಗಿದೆ. ಐದು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಬಂದರೂ, ಆಸ್ಪತ್ರೆಯ ಆಡಳಿತ ಮಂಡಳಿ ಸಮರ್ಪಕ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಡಾ. ಕೃಷ್ಣ ವಿಷಾದ ವ್ಯಕ್ತಪಡಿಸಿದರು.
ಸಾಂಕೇತಿಕ ಕ್ರಮ – ಪೂರ್ಣ ನ್ಯಾಯ ಇಲ್ಲ
“ಕೇವಲ ಇಬ್ಬರನ್ನು ಅಮಾನತು ಮಾಡಲಾಗಿದೆ. ಆದರೆ ಸಿಬ್ಬಂದಿ ಕೊರತೆಯ ಕಾರಣದಿಂದ ಎಲ್ಲರ ಮೇಲೂ ಕ್ರಮ ಸಾಧ್ಯವಾಗಿಲ್ಲ. ಇದು ಸಾಂಕೇತಿಕ ಕ್ರಮ ಮಾತ್ರ” ಎಂದು ಅವರು ಸ್ಪಷ್ಟಪಡಿಸಿದರು.
ಚೆಲುವಾಂಬ ಆಸ್ಪತ್ರೆಯಲ್ಲಿ ಬಯಲಾದ ಈ ಅವ್ಯವಸ್ಥೆ ವೈದ್ಯಕೀಯ ಸಂಸ್ಥೆಗಳ ವ್ಯವಸ್ಥಾಪನದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಈಗ ಲ್ಯಾಬ್ ವರದಿ ಮತ್ತು ಮುಂದಿನ ಕ್ರಮಗಳತ್ತ ಎಲ್ಲರ ದೃಷ್ಟಿ ಹರಿಸಿದೆ.