ಗದಗ ಜಿಲ್ಲೆಯ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಐಪಿಎಸ್ ಅಧಿಕಾರಿ ಅನಿತಾ ಹದ್ದಣ್ಣವರ್ ಅವರ ಸಹೋದರ ಅಕ್ಷತ್ ಹದ್ದಣ್ಣವರ್ ಕಡೆಯಿಂದ ನಡೆದ ಅಹಿತಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಡಿತದ ಮತ್ತಿನಲ್ಲಿ ಠಾಣೆಗೆ ನುಗ್ಗಿದ ಅಕ್ಷತ್, ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅಕ್ಷತ್ ಹದ್ದಣ್ಣವರ್ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತಮ್ಮ ಸಹಚರನೊಂದಿಗೆ ಕಾರಿನಲ್ಲಿ ಠಾಣೆಗೆ ನುಗ್ಗಿ, ವಾಹನ ನಿಲ್ಲಿಸುವ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಪಾರ್ಕಿಂಗ್ ಜಾಗವನ್ನು ಆಕ್ರಮಿಸಿದ್ದಾರೆ. ಇದರಿಂದ ಸ್ಥಳೀಯ ಪೊಲೀಸರೊಂದಿಗೆ ಮಾತಿನ ಚಕಮಕಿ ಉಂಟಾಗಿದೆ. “ನಾನು ವಕೀಲ, ಯಾರೂ ಏನೂ ಮಾಡಲಾಗದು” ಎಂದು ಬೆದರಿಕೆ ಹಾಕಿದ್ದಾನೆ ಎಂಬ ದೂರಿದೆ.
ಘಟನೆಯ ಸಮಯದಲ್ಲಿ ಅಕ್ಷತ್ ರೌಡಿ ಶೈಲಿಯಲ್ಲಿ ವರ್ತನೆ ತೋರಿದ್ದು, ಠಾಣೆ ಹೊರಗೆ ಕೂಡ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದ್ದಾನೆ. ಈ ನಡೆಗೆ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದರೆ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗುತ್ತಿತ್ತು, ಆದರೆ ಅಧಿಕಾರಿ ಸಹೋದರನಿಗೆ ಮಾತ್ರ ಸಡಿಲತೆ ತೋರಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಘಟನೆಯ ನಂತರ ಕೇವಲ ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ನಡೆಸಿ ಬಿಡುಗಡೆ ಮಾಡಿದರೆಂಬ ವಿಷಯವೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. “ಕಾನೂನು ಎಲ್ಲರಿಗೂ ಸಮಾನವೇ ಅಥವಾ ಅಧಿಕಾರಿಗಳ ಬಂಧುಗಳಿಗೆ ಬೇರೆ ನಿಯಮವೇ?” ಎಂಬ ಪ್ರಶ್ನೆ ಜನಮನದಲ್ಲಿ ಮೂಡಿದೆ.
ಈ ಸಂಬಂಧ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರತಿಕ್ರಿಯೆ ನೀಡಿದ್ದು, “ಘಟನೆ ಕುರಿತು 186 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು), 504 (ಪ್ರಚೋದನಕಾರಿ ನಿಂದನೆ) ಹಾಗೂ 506 (ಬೆದರಿಕೆ) ಕಲಂಗಳು ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಪ್ರಾರಂಭಿಸಲಾಗಿದೆ” ಎಂದಿದ್ದಾರೆ.
ಈ ಘಟನೆ ಅಧಿಕಾರಿಗಳ ಬಂಧುಗಳಿಗೆ ಕಾನೂನು ಹೇಗೆ ಜಾರಿಯಾಗುತ್ತದೆ ಎಂಬ ಚರ್ಚೆಗೆ ತೀವ್ರ ತಾಣ ಒದಗಿಸಿದೆ.
