
ದೊಡ್ಡಬಳ್ಳಾಪುರ: ಅಧಿಕಾರ ದುರುಪಯೋಗ ಮಾಡಿಕೊಂಡು ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಲೆಕ್ಕಾಚಾರ ತಪ್ಪಿದ ಬಲಿಯಾದರು. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್ ಅವರು ಲಂಚ ಪಡೆಯುವ ಸಂದರ್ಭದಲ್ಲೇ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.
ಮಾಹಿತಿಯಂತೆ, ನೆಲಮಂಗಲ ತಾಲೂಕಿನ ಗಿರಿಯನಪಾಳ್ಯದ ಸರ್ವೇ ನಂಬರ್ 1/1A1 ವ್ಯಾಪ್ತಿಯಲ್ಲಿರುವ ಜಮೀನಿನ ಕೋರ್ಟ್ ಸೇಲ್ ಡೀಡ್ ಆಧಾರದ ಮೇಲೆ ಖಾತೆ ಮಾಡಿಕೊಡುವ ಪ್ರಕ್ರಿಯೆ ನಡೆಯುತ್ತಿದ್ದಿತ್ತು. ಈ ಸಂಬಂಧ ಅಪ್ಪಗೊಂಡನಹಳ್ಳಿ ಗ್ರಾಮದ ವಕೀಲ ದೊರೆಸ್ವಾಮಿ.ಎಲ್ ಅವರು ಸಂಬಂಧಿಸಿದ ದಾಖಲಾತಿಗಳನ್ನು ಪ್ರಸ್ತುತಪಡಿಸಿದ್ದರು. ಆದರೆ, ಕೆಲಸ ಮುಗಿಸಲು ದಿವಾಕರ್ ಸುಮಾರು 2 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 1.5 ಲಕ್ಷ ರೂಪಾಯಿ ನೀಡುವಂತೆ ಒಪ್ಪಂದವಾಗಿತ್ತು.
ಇಂದು ದೇವನಹಳ್ಳಿಯೊಂದರಲ್ಲಿ ನಿರ್ಧಿಷ್ಟ ಸ್ಥಳದಲ್ಲಿ ಹಣ ಹಸ್ತಾಂತರ ನಡೆಯುತ್ತಿದ್ದ ವೇಳೆ, ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿ ದಿವಾಕರ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ದಾಳಿಗೆ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ನೇತೃತ್ವ ವಹಿಸಿದ್ದರು.
ಸದ್ಯಕ್ಕೆ ಆರೋಪಿಯನ್ನು ವಶಕ್ಕೆ ಪಡೆದು, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಮತ್ತಷ್ಟು ಮಾಹಿತಿ ತನಿಖೆ ಬಳಿಕ ಲಭ್ಯವಾಗಲಿದೆ.