
ಉತ್ತರ ಪ್ರದೇಶದ ಬಲರಾಂಪುರದಲ್ಲಿ ದಿವ್ಯಾಂಗ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಈ ಘಟನೆ ಜಿಲ್ಲೆಯ ಪ್ರಮುಖ ಪೊಲೀಸ್ ಮತ್ತು ಆಡಳಿತಾಧಿಕಾರಿಗಳ ವಸತಿ ಪ್ರದೇಶದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ನಡೆದಿದೆ.
ಸೋಮವಾರ ಸಂಜೆ, ಮಹಿಳೆ ತನ್ನ ಚಿಕ್ಕಪ್ಪನ ಮನೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಾಗ, ಮೂರರಿಂದ ನಾಲ್ಕು ಬೈಕ್‌ಗಳಲ್ಲಿ ಬಂದ ಅಪರಿಚಿತರು ಅವಳನ್ನು ಹಿಂಬಾಲಿಸಿದರು. ಘಟನೆಯ ಕೆಲವು ಕ್ಷಣಗಳ ದೃಶ್ಯ ಪೊಲೀಸ್ ಅಧಿಕಾರಿಗಳ ವಸತಿ ಪ್ರದೇಶದ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದು, ಮಹಿಳೆ ನಿರ್ಜನ ರಸ್ತೆಯಲ್ಲಿ ಓಡುತ್ತಾ ಹಿಂದುಮುಗಿದು ನೋಡುತ್ತಿರುವ ಭೀತಿದಾಯಕ ಕ್ಷಣಗಳನ್ನು ದಾಖಲಿಸಿದೆ.
ಕುಟುಂಬದವರು ಹೇಳುವ ಪ್ರಕಾರ, ಆಕೆಯನ್ನು ತಡೆದು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ, ಬೈಕ್ ಸವಾರರು ಸಾಮೂಹಿಕ ಅತ್ಯಾಚಾರ ಎಸಗಿದರು. ಮನೆಗೆ ಹಿಂತಿರುಗದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿ, ಕೊನೆಗೆ ಪೊಲೀಸ್ ಠಾಣೆಯ ಹತ್ತಿರದ ಪೊದೆಗಳಲ್ಲಿ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಹಚ್ಚಿದರು. ಆ ಸಮಯದಲ್ಲಿ ಆಕೆಯ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು.
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ, ಪ್ರಜ್ಞೆ ಬಂದ ನಂತರ ತನ್ನ ಮೇಲೆ ಬೈಕ್‌ನಲ್ಲಿದ್ದವರು ಅತ್ಯಾಚಾರ ಎಸಗಿದ ಬಗ್ಗೆ ಹೇಳಿಕೆ ನೀಡಿದ್ದಾಳೆ. ವೈದ್ಯಕೀಯ ಪರೀಕ್ಷೆಯಲ್ಲೂ ಅತ್ಯಾಚಾರದ ಸಂಗತಿ ದೃಢಪಟ್ಟಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ, ಎಸ್‌ಪಿ, ನ್ಯಾಯಮೂರ್ತಿಗಳು ಸೇರಿದಂತೆ ಉನ್ನತ ಅಧಿಕಾರಿಗಳ ವಸತಿ ಪ್ರದೇಶದ ಸಮೀಪದಲ್ಲಿ ಈ ಘಟನೆ ನಡೆದಿರುವುದರಿಂದ, ಭದ್ರತೆ ಕುರಿತ ಪ್ರಶ್ನೆಗಳು ಎದ್ದಿವೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392