
ಚನ್ನಪಟ್ಟಣ: ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳು ಆತಂಕ ಉಂಟುಮಾಡುತ್ತಿವೆ. ಇತ್ತೀಚಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ನಡೆದೊಂದು ದುರಂತ ಘಟನೆ ಈ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಕೆ. ಕುಮಾರ್ (48) ಎಂಬವರು ಡಿಜಿಟಲ್ ಮೋಸಕಾರರ ಬಲೆಗೆ ಬಿದ್ದು ಸೋಮವಾರ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಬೆಸ್ಕಾಂನಲ್ಲಿ ಔಟ್‌ಸೋರ್ಸ್ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರು ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದವರು.
ಕುಮಾರ್ ಸಾವಿಗೆ ಕಾರಣವಾಯ್ತು ಎಂಬುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದ್ದು — ‘ವಿಕ್ರಮ್ ಗೋಸ್ವಾಮಿ’ ಎಂಬಾತ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, “ನಿಮ್ಮ ವಿರುದ್ಧ ಅರೆಸ್ಟ್ ವಾರಂಟ್ ಇದೆ” ಎಂದು ಹೆದರಿಸಿ, ಪ್ರಕರಣವೊಂದರಲ್ಲಿ ಬಂಧಿಸುವ ಬೆದರಿಕೆ ನೀಡಿ ಹಣ ಪೀಡಿಸಿದ್ದರು. ಮೊದಲು 1.95 ಲಕ್ಷ ರೂ. ಖಾತೆಗೆ ಹಾಕುವಂತೆ ಮಾಡಿದ್ದಾನೆ. ಬಳಿಕ ಹಂತ ಹಂತವಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ 11 ಲಕ್ಷ ರೂ. ವರೆಗೆ ಹಣ ವರ್ಗಾಯಿಸಲಾಗಿತ್ತು. ಕೊನೆಗೆ ಇನ್ನೂ 2.75 ಲಕ್ಷ ರೂ. ಪಾವತಿಸಲು ಒತ್ತಡ ತರಲಾಗುತ್ತಿತ್ತು.
ಈ ಆರ್ಥಿಕ ಒತ್ತಡ, ಮಾನಸಿಕ ತೊಂದರೆಗಳಿಂದ ಬೇಸತ್ತ ಕುಮಾರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸೈಬರ್ ಅಪರಾಧಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿರುವುದು ಇಂತಹ ಘಟನೆಗಳಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.