ಧರ್ಮಸ್ಥಳ, ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ತಿಪಂಜರಗಳು ಮತ್ತು ಅನುಮಾನಾಸ್ಪದ ಶವಗಳ ಪ್ರಕರಣವು ಈಗ ಗಂಭೀರ ತಿರುವು ಪಡೆದಿದೆ. ಶಂಕಿತ ಸ್ಥಳದಲ್ಲಿ ವಿಶೇಷ ತನಿಖಾ ತಂಡ (SIT) ಈಗಾಗಲೇ ಪಾಯಿಂಟ್ ನಂಬರ್ 6ರಲ್ಲಿ ಮನುಷ್ಯನ ಮೂಳೆಗಳ ಸೆರೆಹಿಡಿದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಅದು ಕೆಲವೊಂದು ವರ್ಷಗಳ ಹಿಂದಿನದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಬಾಲಕಿಯ ಶವವಿರಬಹುದೆಂದು ದೂರುದಾರನ ಸ್ಪೋಟಕ ಹೇಳಿಕೆ

ಈ ನಡುವೆ ಪ್ರಕರಣದ ಪ್ರಮುಖ ದೂರುದಾರನೊಬ್ಬ ನೀಡಿರುವ ಭಯಾನಕ ಹೇಳಿಕೆ ತನಿಖೆಗೆ ಹೊಸ ಬೆಳಕು ಚೆಲ್ಲಿದೆ. “ನಾನು 12ರಿಂದ 15 ವರ್ಷ ವಯಸ್ಸಿನ ಬಾಲಕಿಯ ಶವವನ್ನು ನೋಡಿದ್ದೆ. ಅವಳು ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಲಂಗ ಅಥವಾ ಒಳಉಡುಪು ಇರಲಿಲ್ಲ. ಕುತ್ತಿಗೆಗೆ ಹಿಸುಕಿದ ಗುರುತುಗಳು ಸ್ಪಷ್ಟವಾಗಿದ್ದವು. ಲೈಂಗಿಕ ದೌರ್ಜನ್ಯವಾಗಿದೆ ಎಂಬುದು ಸ್ಪಷ್ಟವಾಗಿತ್ತು,” ಎಂದು ಆ ವ್ಯಕ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಆ ಶವವನ್ನು ಹೂಳಲು ನನ್ನ ಬಳಿ ಗುಂಡಿ ಅಗೆಯುವಂತೆ ಹೇಳಲಾಗಿತ್ತು. ಶಾಲಾ ಬ್ಯಾಗ್‌ ಸಹ ಸೇರಿಸಿ ಹೂಳಲು ಸೂಚನೆ ನೀಡಲಾಯಿತೆ. ಆ ದೃಶ್ಯ ಇಂದಿಗೂ ನನ್ನ ಮನಸ್ಸಿನಿಂದ ಮಾಸಿಲ್ಲ,” ಎಂದು ಆತ ಭಾವುಕವಾಗಿ ಹೇಳಿದ್ದಾನೆ.

2010ರಲ್ಲಿ ನಾಪತ್ತೆಯಾದ ಶಾಲಾ ಬಾಲಕಿ?

ಈ ಹೇಳಿಕೆಯ ನಂತರ ಎಸ್‌ಐಟಿ ಅಧಿಕಾರಿಗಳು ಇದೀಗ ಶಾಲಾ ಬಾಲಕಿಯ ನಾಪತ್ತೆ ಪ್ರಕರಣಗಳತ್ತ ತಮ್ಮ ಗಮನ ಹರಿಸಿದ್ದು, ಧರ್ಮಸ್ಥಳ, ಕಲ್ಲೇರಿ ಹಾಗೂ ಸುತ್ತಮುತ್ತಲಿನ ಶಾಲೆಗಳಲ್ಲಿ 2010ರಲ್ಲಿ ಅಥವಾ ಅದಕ್ಕೂ ಮುಂಚೆ ನಾಪತ್ತೆಯಾಗಿದ್ದ ಬಾಲಕಿಯರ ಕುರಿತು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಈ ಕುರಿತು ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ.

ಎಸ್‌ಐಟಿ ಸಹಾಯವಾಣಿ – ಸಾರ್ವಜನಿಕ ಪ್ರತಿಕ್ರಿಯೆ ಭಾರೀ

ಈ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಎಸ್‌ಐಟಿ ಕಳೆದ ಎರಡು ದಿನಗಳ ಹಿಂದೆ ಸಹಾಯವಾಣಿ (ಹೆಲ್ಪ್‌ಲೈನ್) ಆರಂಭಿಸಿದ್ದು, ಈಗಾಗಲೇ ನೂರಾರು ಕರೆಗಳು ಬಂದಿವೆ. ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಕರೆಗಳು ಬಂದಿದೆ.

ಹೆಚ್ಚಿನವರು ತನಿಖೆಯ ಪ್ರಗತಿ ಕುರಿತು ಮಾಹಿತಿ ಕೇಳುತ್ತಿದ್ದರೆ, ಕೆಲವರು ತಮ್ಮ ಅನುಮಾನಗಳ ಕುರಿತು ಸಲಹೆಗಳನ್ನು ಸಹ ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ಯಾವುದೇ ಹೊಸ ಪ್ರಕರಣಗಳ ಬಗ್ಗೆ ನೇರ ದೂರುಗಳು ಬಂದಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮೇಲ್ಮಟ್ಟದ ತನಿಖೆ ನಿರೀಕ್ಷೆ

ಪ್ರಕರಣದ ಪ್ರಾಮುಖ್ಯತೆ ಮತ್ತು ಗಂಭೀರತೆಯ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. ಶವಕ್ಕೆ ಸಂಬಂಧಿಸಿದ ಡಿಎನ್‌ಎ ಪರೀಕ್ಷೆಗಳು ಮತ್ತು 2010ರಲ್ಲಿ ನಾಪತ್ತೆಯಾಗಿದ್ದ ಬಾಲಕಿಯರ ದಾಖಲಾತಿಗಳು ಪ್ರಕರಣಕ್ಕೆ ತಿರುವು ತರುವ ಸಾಧ್ಯತೆಯಿದೆ.

ಇಡೀ ರಾಜ್ಯವೇ ಈ ಪ್ರಕರಣದ ತನಿಖೆಯತ್ತ ಕಣ್ಣಿಟ್ಟಿರುವ ಸಂದರ್ಭ, ನ್ಯಾಯ ಸಿಗುವವರೆಗೆ ಎಸ್‌ಐಟಿ ಕಾರ್ಯಚಟುವಟಿಕೆ ನಿರಂತರವಾಗಿ ಮುಂದುವರಿಯಲಿದೆ.

error: Content is protected !!