ರಾಜಧಾನಿ ಬೆಂಗಳೂರಿನಲ್ಲಿ ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಇದರ ಹಿಂದೆ ಪತ್ನಿಯೇ ನಡೆಸಿದ ವಂಚನೆ ಬಹಿರಂಗವಾಗಿದೆ.

39 ವರ್ಷದ ಮೆಹೆಬೂಬ್ ಬಾಷಾ ಅವರು ಬದುಕಿದ್ದರೂ ತಮ್ಮ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. 2025ರ ಏಪ್ರಿಲ್ 23ರಂದು ಬಾಷಾ ಮೃತಪಟ್ಟಿದ್ದಾರೆ ಎಂದು ಚಿಕ್ಕಪೇಟೆಯ ಜನನ ಮತ್ತು ಮರಣ ನೋಂದಣಾಧಿಕಾರಿ ಪ್ರಮಾಣ ಪತ್ರ ನೀಡಿದ್ದರಿಂದ ಅವರ ಬಿಪಿಎಲ್ ಕಾರ್ಡ್ ಸಹ ರದ್ದಾಗಿತ್ತು.

ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ನಡೆಸಿದ ತನಿಖೆಯಲ್ಲಿ ಪ್ರಕರಣದ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಬಾಷಾ ಅವರ ಪತ್ನಿ ಶಬಾನಾ, ತನ್ನ ಗಂಡನ ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಬಳಸಿ ಕಿದ್ವಾಯಿ ಆಸ್ಪತ್ರೆಯಲ್ಲಿ ಬೇರೊಬ್ಬ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದ್ದಳು ಎಂಬುದು ಪತ್ತೆಯಾಗಿದೆ.

ಆಸ್ಪತ್ರೆಯ ಎಲ್ಲಾ ಹಂತಗಳಲ್ಲೂ ಬಾಷಾ ಅವರ ದಾಖಲೆಗಳನ್ನು ಬಳಸಲಾಗಿದ್ದರಿಂದ, ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಗುರುತು ತಪ್ಪಾಗಿ ದಾಖಲಾಗಿತ್ತು. ಬಳಿಕ 2025ರ ಏಪ್ರಿಲ್ 23ರಂದು ಆ ಅನ್ಯ ವ್ಯಕ್ತಿ ಮೃತಪಟ್ಟಾಗ, ಆಸ್ಪತ್ರೆ ದಾಖಲೆಗಳ ಆಧಾರದ ಮೇಲೆ ಬಾಷಾ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಹೊರಡಿಸಲಾಯಿತು.

ಇನ್ನಷ್ಟು ಅಚ್ಚರಿಯ ವಿಷಯವೆಂದರೆ, ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಕೂಡ ಶಬಾನಾ ‘ತನ್ನ ಪತಿ’ ಎಂದು ಸಹಿ ಹಾಕಿ ಪಡೆದುಕೊಂಡಿದ್ದಾಳೆ. ಇದರಿಂದ ಆಸ್ಪತ್ರೆ ಮತ್ತು ಬಿಬಿಎಂಪಿ ಅಧಿಕಾರಿಗಳು ದಾಖಲೆಗಳನ್ನೇ ನಂಬಿ ಕ್ರಮ ಕೈಗೊಂಡಿದ್ದರು.

ಈ ಪ್ರಕರಣವು ದಾಖಲೆಗಳ ದುರುಪಯೋಗದ ಮೂಲಕ ನಡೆದ ದೊಡ್ಡ ಮಟ್ಟದ ವಂಚನೆಯನ್ನು ಬಹಿರಂಗಪಡಿಸಿದ್ದು, ಪತ್ನಿಯ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Related News

error: Content is protected !!