ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು ನಟಿ ರಮ್ಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ನಟ ದರ್ಶನ್ ಅವರ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಭಾಷೆಯಲ್ಲಿ ಕಮೆಂಟ್ ಮಾಡಿರುವ ಘಟನೆಗೆ ಇದೀಗ ಗಂಭೀರ ತಿರುವು ಸಿಕ್ಕಿದೆ.

ನಟಿ ರಮ್ಯಾ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ ಸಂದೇಶಗಳನ್ನು ಕಳಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ರಾಜ್ಯ ಮಹಿಳಾ ಆಯೋಗ ಸಜ್ಜಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, “ಇದು ರಮ್ಯಾ ಅವರನ್ನು ಮಾತ್ರವಲ್ಲದೆ, ಎಲ್ಲಾ ಮಹಿಳೆಯರ ಗೌರವದ ವಿರುದ್ಧ ನಡೆದಿರುವ ಘೋರ ಅಪರಾಧ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸ್ವಯಂ ಪ್ರೇರಿತ ದೂರು, ಪೊಲೀಸ್ ಆಯುಕ್ತರಿಗೆ ಪತ್ರ

“ಈ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ನಮಗೆ ದೂರು ಕೂಡ ಬಂದಿತ್ತು. ಆದ್ದರಿಂದ ನಾವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡೆವು. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಭಾಷೆ ಬಳಸುವುದು ಕಾನೂನಿನ ಪ್ರಕಾರ ದಂಡನೀಯ ಅಪರಾಧ. ಇದೇ ಕಾರಣಕ್ಕೆ ನಾವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದೇವೆ” ಎಂದು ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಅಶ್ಲೀಲ ಸಂದೇಶ, ಕಮೆಂಟ್ ಮೇಲೆ ತಕ್ಷಣ ಕ್ರಮ ಅಗತ್ಯ

“ಇಂತಹ ಕಮೆಂಟ್‌ಗಳನ್ನು ತಕ್ಷಣವಾಗಿ ಬ್ಲಾಕ್ ಮಾಡಿಸಿ, ಅವುಗಳನ್ನು ಪೋಸ್ಟ್ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಇದು ಯಾವುದೇ ವ್ಯಕ್ತಿಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಕಿತ್ತುಕೊಳ್ಳುವುದು ಅಲ್ಲ, ಆದರೆ ಆ ಹಕ್ಕು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿರಬಾರದು” ಎಂದು ಅವರು ಹೇಳಿದರು.

7 ವರ್ಷ ಜೈಲು ಶಿಕ್ಷೆ ಸಾಧ್ಯತೆ

“ಹೆಣ್ಣಿನ ಕುರಿತು ಅಶ್ಲೀಲ ಕಮೆಂಟ್‌ಗಳು ಅಥವಾ ಸಂದೇಶಗಳನ್ನು ಕಳಿಸುವುದು ಭಾರತೀಯ ದಂಡಸಂಹಿತೆಯ ಪ್ರಕಾರ ಗಂಭೀರ ಅಪರಾಧವಾಗಿದೆ. ತಪ್ಪು ಸಾಬೀತಾದರೆ ಕನಿಷ್ಠ 7 ವರ್ಷವರೆಗೆ ಜೈಲು ಶಿಕ್ಷೆ ವಿಧವಾಗಬಹುದು. ಕಮೆಂಟ್ ಮಾಡುವ ಮೊದಲು ಇದರ ಪರಿಣಾಮಗಳ ಬಗ್ಗೆ ಯೋಚಿಸಬೇಕು” ಎಂದು ಅವರು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಟಿ ರಮ್ಯಾ ವಿರುದ್ಧ ನಡೆಯುತ್ತಿರುವ ಈ ದೌರ್ಜನ್ಯ ಸಾಮಾಜಿಕ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತಿದ್ದು, ಇಂಥ ಅಪರಾಧಗಳ ವಿರುದ್ಧದ ಹೋರಾಟಕ್ಕೆ ಮಹಿಳಾ ಆಯೋಗ ಮುಂಚೂಣಿಯಲ್ಲಿ ನಿಲ್ಲಲು ಸಿದ್ಧವಾಗಿದೆ ಎಂಬುದನ್ನು ಈ ಘಟ್ಟ ಸ್ಪಷ್ಟಪಡಿಸಿದೆ.

Related News

error: Content is protected !!