ಬೀದರ್ ಜಿಲ್ಲೆಯಲ್ಲಿ ಸರ್ಕಾರದ ಅಧಿಕಾರಿಗಳನ್ನು ಶಾಕ್‌ಗೆ ಒಳಪಡಿಸುವಂತಹ ಭೂಮಿ ಹಗರಣವೊಂದು ಬೆಳಕಿಗೆ ಬಂದಿದೆ. ನಕಲಿ ಡಿಜಿಟಲ್ ಸಹಿ ಬಳಸಿ ಒಬ್ಬರ ಹೆಸರಿನಲ್ಲಿದ್ದ ಭೂಮಿಯನ್ನು ಮತ್ತೊಬ್ಬನ ಹೆಸರಿಗೆ ವರ್ಗಾಯಿಸಿರುವ ಗಂಭೀರ ಘಟನೆ ವರದಿಯಾಗಿದೆ.

ನಂದಗಾಂವ ಗ್ರಾಮದ ಜಗನ್ನಾಥ ಎಂಬುವರ ಹೆಸರಿನಲ್ಲಿ ದಾಖಲಾಗಿದ್ದ 8 ಎಕರೆ 13 ಗುಂಟೆ ಭೂಮಿಯನ್ನು ಮೋಸಪೂರ್ವಕವಾಗಿ ಮೊಹಮ್ಮದ್ ಇಸ್ಮಾಯಿಲ್ ಎಂಬುವರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಇದನ್ನು ಸರ್ಕಾರದ ಅಧಿಕೃತ ಡಿಜಿಟಲ್ ಸಹಿಯನ್ನು ನಕಲು ಮಾಡಿ ಅಕ್ರಮವಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಗರಣದಲ್ಲಿ ಬೀದರ್ ತಾಲ್ಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ ಸೃಜನ್ ಹಾಗೂ ಅಂಬರೀಶ್ ಎಂಬುವವರು ತಹಶೀಲ್ದಾರ ದಿಲ್ ಶಾದ್ ಅಲಿ ಮಹತ್ ಅವರ ಡಿಜಿಟಲ್ ಸಹಿಯನ್ನು ನಕಲು ಮಾಡಿಕೊಂಡು ಜಮೀನು ದಾಖಲೆಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಅವರು ಪ್ರಿಂಟಾದ ಡಿಜಿಟಲ್ ಸಹಿಯನ್ನು ಬಳಸಿ ಪಹಣಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಅಕ್ರಮ ವರ್ಗಾವಣೆ ನಡೆಸಿದ್ದಾರೆ.

ಈ ಕುರಿತಂತೆ ತಹಶೀಲ್ದಾರ್ ಅವರು ಕೂಡಾ ಚುರುಕಾಗಿ ಕ್ರಮ ಕೈಗೊಂಡಿದ್ದು, ಜಿಲ್ಲಾಧಿಕಾರಿಗೆ ಸೂಕ್ತ ವರದಿ ಸಲ್ಲಿಸಿದ್ದಾರೆ. ಜೊತೆಗೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕೂಡಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಈ ಘಟನೆ ಆಡಳಿತ ವ್ಯವಸ್ಥೆಯ ಭದ್ರತೆ ಹಾಗೂ ಡಿಜಿಟಲ್ ಡಾಕ್ಯುಮೆಂಟ್‌ನ ಸುರಕ್ಷತೆ ಕುರಿತಾಗಿ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಇದೀಗ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಾಗೂ ಭೂಮಿ ಮೂಲ ಮಾಲೀಕನಿಗೆ ಮರಳಿಸುವಂತೆ ಹೋರಾಟ ಆರಂಭವಾಗಿದೆ.

Related News

error: Content is protected !!