ಮಂಗಳೂರು, ಜುಲೈ 26: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಭೂಮಿಗೆ ಹೂತು ಇಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ಆರಂಭಿಸಿದೆ.
ಜುಲೈ 25ರ ಸಂಜೆ ಎಸ್‌ಐಟಿ ತಂಡ ಧರ್ಮಸ್ಥಳ ಠಾಣೆಗೆ ದಿಢೀರ್ ಭೇಟಿ ನೀಡಿದ್ದು, ಸಂಬಂಧಿತ ದಾಖಲೆಗಳು ಹಾಗೂ ಸ್ಥಳೀಯ ಪೊಲೀಸರಿಂದ ಮಾಹಿತಿ ಕಲೆ ಹಾಕಿದೆ. ಈ ವೇಳೆ ತನಿಖಾ ಅಧಿಕಾರಿ ಜಿತೇಂದ್ರ ದಯಾಮ್ ಅವರು ಸ್ಥಳೀಯ ಎಸ್‌ಐ ಸಮರ್ಥ ಆರ್. ಗಾಣಿಗೇರ್ ಜತೆ ವಿಶೇಷ ಸಭೆ ನಡೆಸಿದರು.
ಮತ್ತೊಂದೆಡೆ, ಶನಿವಾರ (ಜುಲೈ 26) ದೂರು ನೀಡಿರುವ ವ್ಯಕ್ತಿಯನ್ನು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಗೆ ದೂರುದಾರ ತನ್ನ ನ್ಯಾಯಾಂಗ ವಕೀಲರ ಜೊತೆ ಆಗಮಿಸಿದ್ದು, ಮಲ್ಲಿಕಟ್ಟೆಯ ಸರ್ಕಾರಿ ಐಬಿಯಲ್ಲಿ ಎಸ್‌ಐಟಿಗೆ ಎರಡು ಕೊಠಡಿಗಳನ್ನು ಮೀಸಲಿಡಲಾಗಿದೆ.
ಧರ್ಮಸ್ಥಳ ಶವ ಹೂತು ಪ್ರಕರಣವು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಮೂರು ಜಿಲ್ಲೆಗಳ—ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ—ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಈ ತನಿಖಾ ತಂಡಕ್ಕೆ ನಿಯೋಜಿಸಲಾಗಿದೆ.
ಪ್ರಕರಣದ ಗಂಭೀರತೆ ಹಾಗೂ ಸಾರ್ವಜನಿಕ ಆಸಕ್ತಿಯನ್ನು ಪರಿಗಣಿಸಿದಂತೆ ಎಸ್‌ಐಟಿ ತಂಡ ತನಿಖೆಗೆ ವೇಗ ನೀಡಿದ್ದು, ಮುಂದಿನ ದಿನಗಳಲ್ಲಿ ಸಾಕ್ಷ್ಯ ಸಂಗ್ರಹ ಹಾಗೂ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
