ಬೆಂಗಳೂರು: ಧರ್ಮಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನಲೆಯಲ್ಲಿ, ಈ ಪ್ರದೇಶದಲ್ಲಿ ಸಂಭವಿಸಿದ ಅಸ್ವಾಭಾವಿಕ ಸಾವು, ಅತ್ಯಾಚಾರ, ಕೊಲೆ ಸೇರಿದಂತೆ ಗಂಭೀರ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಇದೇ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, “ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಪ್ರಮಾಣಿಕ ಹೇಳಿಕೆ ನೀಡಿದ್ದಾರೆ. ಇದಲ್ಲದೆ, ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಕುಟುಂಬದವರು ನೀಡಿರುವ ಪ್ರಸ್ತಾಪಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಪ್ರದೇಶದಲ್ಲಿ ಕಳೆದ ಎರಡು ದಶಕಗಳಲ್ಲಿ ಹಲವಾರು ಮಹಿಳೆಯರು ನಾಪತ್ತೆಯಾಗಿದ್ದು, ಕೆಲವರ ಆತ್ಮಹತ್ಯೆ, ಕೊಲೆ, ಅತ್ಯಾಚಾರ ಪ್ರಕರಣಗಳು ಅನುಮಾನಾಸ್ಪದ ರೀತಿಯಲ್ಲಿ ಮುಚ್ಚಲ್ಪಟ್ಟಿರುವ ಆರೋಪಗಳು ಕೇಳಿಬರುತ್ತಿವೆ” ಎಂದು ಹೇಳಿದ್ದಾರೆ.

ಪೊಲೀಸರು ಈ ಪ್ರಕರಣಗಳಲ್ಲಿ ನಿರ್ಲಕ್ಷ್ಯ ತೋರಿರುವ ಬಗ್ಗೆ ಸಹ ಕುಟುಂಬಸ್ಥರು ಗಂಭೀರ ಆರೋಪ ಮಾಡಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, “ಧರ್ಮಸ್ಥಳ ಪ್ರದೇಶದಲ್ಲಿ ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರ ಸಂಪೂರ್ಣ ವಿವರ, ಪತ್ತೆಯಾಗಿರುವವರ ಸಂಖ್ಯೆ, ಅಸ್ವಾಭಾವಿಕ ಸಾವು, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಸಿದ್ಧಪಡಿಸಿ, ಏಳು ದಿನಗಳಲ್ಲಿ ಸರ್ಕಾರಕ್ಕೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿಗೆ ಸೂಚನೆ ನೀಡಲಾಗಿದೆ” ಎಂದು ಡಾ. ನಾಗಲಕ್ಷ್ಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಕರಣಗಳ ಪೂರಕ ತನಿಖೆಗೆ ಎಸ್‌ಐಟಿ ರಚನೆಯೇ ಒತ್ತಾಯವಾಗಿದ್ದು, ಸತ್ಯಾನ್ವೇಷಣೆಯ ಮೂಲಕ ನ್ಯಾಯ ಒದಗಿಸುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ.

Related News

error: Content is protected !!