ಪಲನಾಡು (ಆಗಸ್ಟ್ 10) – ಆಂಧ್ರಪ್ರದೇಶದ ಪಲನಾಡು ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ನಡೆದ ಕ್ರೂರ ರ‍್ಯಾಗಿಂಗ್ ಪ್ರಕರಣವು ಇದೀಗ ಬೆಳಕಿಗೆ ಬಂದು ಖಂಡನೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಹಿರಿಯ ವಿದ್ಯಾರ್ಥಿಗಳೊಂದು ಗುಂಪು ಕಿರಿಯ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ನೀಡುತ್ತಾ, ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ.
ಮಾಹಿತಿಯ ಪ್ರಕಾರ, ದ್ವಿತೀಯ ವರ್ಷದ ವಿದ್ಯಾರ್ಥಿಗಳುನ್ನು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದು, ಈ ಕೃತ್ಯದಲ್ಲಿ ಹೊರಗಿನವರೂ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ವಿಡಿಯೋದಲ್ಲಿ ಗುಂಪೊಂದು ಬಾಲಕನ ಮೇಲೆ ದೌರ್ಜನ್ಯ ಎಸಗುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.
ಘಟನೆಯ ನಂತರ, ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಕಾಲೇಜು ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಯ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರ‍್ಯಾಗಿಂಗ್ ತಡೆಗೆ ಸಂಬಂಧಿಸಿದ ಕ್ರಮಗಳ ಕುರಿತ ಚರ್ಚೆ ಮತ್ತೆ ಜೋರಾಗಿದೆ.
