
ಕಣ್ಣೂರು (ಕೇರಳ), ಜುಲೈ 29: ಬಸ್ ಪಾಸ್ ಇಲ್ಲದ ಮಹಿಳೆಯನ್ನು ಕೆಳಗಿಳಿಸಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯ ಗಂಡ ಹಾಗೂ ಅವನ ಸ್ನೇಹಿತರು ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ನಾದಾಪುರದ ಇರಿಂಗಣ್ಣೂರಿನ ನಿವಾಸಿ ವಿಷ್ಣು ಎಂಬುವವರು ಜಗನ್ನಾಥ್ ಎಂಬ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದಾರೆ. ಕಣ್ಣೂರಿನಿಂದ ತಲಶ್ಶೇರಿಗೆ ತೆರಳುತ್ತಿದ್ದ ಈ ಬಸ್ಸಿನಲ್ಲಿ ಪಾಸಿಲ್ಲದೇ ಪ್ರಯಾಣಿಸುತ್ತಿದ್ದ ಮಹಿಳೆಯೊಂದಿಗೆ ಕಂಡಕ್ಟರ್ ವಾಗ್ವಾದ ನಡೆಸಿದ್ದರು. ಈ ಮಾತಿನ ಚಕಮಕಿ ನಡುವೆ ಮಹಿಳೆಯ ಮೊಬೈಲ್ ನೆಲಕ್ಕೆ ಬಿದ್ದು ಹಾನಿಯಾಗಿದೆ. ಬಳಿಕ, ವಿಧಿಯ ನಿಯಮದಂತೆ ರಿಯಾಯಿತಿ ಪಾಸ್ ಇಲ್ಲದ ಕಾರಣದಿಂದ ಆಕೆಯನ್ನು ಬಸ್ಸಿನಿಂದ ಕೆಳಗಿಳಿಸಲಾಯಿತು.
ಈ ವಿಷಯವನ್ನು ಮಹಿಳೆ ತನ್ನ ಪತಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಬಸ್ಸಿಗೆ ಹತ್ತಿ, ಪೆರಿಂಗತ್ತೂರು ಬಳಿ ಕಾಣಿಸಿಕೊಂಡ ವಷ್ಣು ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ತಲಶ್ಶೇರಿ-ತೊಟ್ಟಿಲ್ ಪಾಲಂ ಮಾರ್ಗದಲ್ಲಿ ಓಡುತ್ತಿದ್ದ ಬಸ್ಸಿನಲ್ಲಿ, ಎಲ್ಲರ ದೃಷ್ಟಿಯಲ್ಲೇ ಕ್ರೂರವಾಗಿ ಥಳಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಕಂಡಕ್ಟರ್ ವಿಷ್ಣು ಅವರನ್ನು ತಕ್ಷಣ ತಲಶ್ಶೇರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಆತಂಕಕ್ಕೊಳಗಾದ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಶಂಕಿತರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆಗಾರರ ಪತ್ತೆಗಾಗಿ ತನಿಖೆ ಪ್ರಾರಂಭಿಸಿದ್ದಾರೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿದೆ.