ಬೆಂಗಳೂರು: ಹೊಸ ಕಾರು ಕೊಡಿಸುತ್ತೇನೆ ಎಂದು ನಂಬಿಸಿ ಆಂಧ್ರಪ್ರದೇಶಕ್ಕೆ ಕರೆಸಿಕೊಂಡ ಬಾಮೈದನೇ ತನ್ನ ಸ್ವಂತ ಅಕ್ಕನ ಗಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ ಶಾಕ್ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ 11 ತಿಂಗಳಷ್ಟೇ ಕಳೆದಿದ್ದ ವಿನಯ್ ಕುಮಾರ್ (30) ಈ ದಾರುಣ ಹತ್ಯೆಗೆ ಬಲಿಯಾದವರು.

ಚಿಕ್ಕಬಾಣವಾರದಲ್ಲಿ ವಾಸವಾಗಿದ್ದ ವಿನಯ್ ಕುಮಾರ್ ಖಾಸಗಿ ಕಂಪನಿಯೊಂದನ್ನು ನಡೆಸುತ್ತಿದ್ದರು. ಅವರು ಸುಮಾರು 11 ತಿಂಗಳ ಹಿಂದೆ ಮೇಘನಾ ಎಂಬುವವರೊಂದಿಗೆ ಮನೆಯವರ ಸಮ್ಮತಿಯ ಮೇರೆಗೆ ಮದುವೆಯಾಗಿದ್ದರು. ದಂಪತಿಗಳ ಜೀವನ ಸುಗಮವಾಗಿ ಸಾಗುತ್ತಿದ್ದರೂ, ಕೆಲ ಸಮಯದ ಹಿಂದೆ ಪತ್ನಿಯ ಅಣ್ಣ ರಾಜು ಜೊತೆ ಸಣ್ಣಪುಟ್ಟ ವಿಷಯಕ್ಕೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ವೇಳೆ ವಿನಯ್ ರಾಜುವನ್ನು ಬೈದಿದ್ದರಿಂದ ಮನಸ್ಸಿನಲ್ಲಿ ದ್ವೇಷ ಬೆಳೆದಿದ್ದು, ಸೇಡು ತೀರಿಸಿಕೊಳ್ಳಲು ರಾಜು ಸಂಚು ರೂಪಿಸಿದ್ದನು.

ವಿನಯ್ ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದ ಸಂದರ್ಭದಲ್ಲೇ, ಪತ್ನಿ ಮೇಘನಾ ‘ನಮ್ಮ ಅಣ್ಣ ಹಣ ಸಹಾಯ ಮಾಡುತ್ತಾನೆ, ಅವನ ಬಳಿ ಹೋಗಿ ಹಣ ತೆಗೆದುಕೊಂಡು ಬಾ’ ಎಂದು ಹೇಳಿದ್ದಾಳೆ. ಪತ್ನಿಯ ಮಾತನ್ನು ನಂಬಿದ ವಿನಯ್, ತನ್ನ ಸ್ನೇಹಿತನ ‘ಹಿಮಾಲಯನ್’ ಬೈಕ್ ಪಡೆದುಕೊಂಡು ಆಂಧ್ರಪ್ರದೇಶದ ಲೇಪಾಕ್ಷಿಗೆ ತೆರಳಿದ್ದರು.

ಆದರೆ ಲೇಪಾಕ್ಷಿಗೆ ತೆರಳಿದ ಬಳಿಕ ವಿನಯ್ ಎರಡು ದಿನಗಳಾದರೂ ಮನೆಗೆ ವಾಪಸ್ ಬಾರದಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಲೇಪಾಕ್ಷಿಗೆ ತೆರಳಿ ಹುಡುಕಾಟ ಆರಂಭಿಸಿದರು. ವಿನಯ್ ಬಳಸಿದ್ದ ಬೈಕ್‌ಗೆ ಜಿಪಿಎಸ್ ಅಳವಡಿಸಲಾಗಿದ್ದರಿಂದ ಅದರ ಸಹಾಯದಿಂದ ಹುಡುಕಾಟ ನಡೆಸಿದಾಗ ಬೈಕ್ ಪತ್ತೆಯಾಯಿತು. ಬೈಕ್ ಬಿದ್ದಿದ್ದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ವಿನಯ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರಾಜು ಬ್ಯಾಟ್ ಹಾಗೂ ಕಬ್ಬಿಣದ ರಾಡ್ ಬಳಸಿ ವಿನಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಕೊಲೆ ಬಳಿಕ ಪರಾರಿಯಾಗಿದ್ದ ರಾಜುವನ್ನು ಲೇಪಾಕ್ಷಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಹತ್ಯೆಯಲ್ಲಿ ಪತ್ನಿಯ ಪಾತ್ರವಿದೆಯೇ ಎಂಬ ಅನುಮಾನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪತ್ನಿಯ ಅಣ್ಣನನ್ನು ನಂಬಿ ತೆರಳಿದ ವ್ಯಕ್ತಿ ಶವವಾಗಿ ಮರಳಿರುವುದು ಕುಟುಂಬಸ್ಥರ ನೋವನ್ನು ಮತ್ತಷ್ಟು ಗಾಢಗೊಳಿಸಿದೆ.

error: Content is protected !!