
ಉಡುಪಿ ಜಿಲ್ಲೆಯ ನ್ಯಾಯಾಲಯ ಆವರಣದಲ್ಲಿ ಲಂಚ ಪಡೆಯುತ್ತಿದ್ದುದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸಹಾಯಕ ಸರಕಾರಿ ಅಭಿಯೋಜಕರನ್ನು ವಶಕ್ಕೆ ಪಡೆದಿದ್ದಾರೆ.
ಮರಳು ವಾಹನ ಬಿಡುಗಡೆಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದ ವೇಳೆ, ಲೋಕಾಯುಕ್ತ ಅಧಿಕಾರಿಗಳು ಆತನ ಕಚೇರಿಯಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭ, ಎರಡು ಸಾವಿರ ರೂಪಾಯಿ ಲಂಚ ಪಡೆದುಕೊಳ್ಳುತ್ತಿರುವಾಗಲೇ ಅವರು ಪೊಲೀಸರ ಬಲೆಗೆ ಬಿದ್ದರು.
ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಉಡುಪಿ ಪ್ರಭಾರ ಡಿವೈಎಸ್ಪಿ ಮಂಜುನಾಥ್, ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್ ಎಂ.ಎನ್., ಎಎಸ್ಸೆ ನಾಗೇಶ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ದಾಳಿ ಪರಿಣಾಮ, ಸರ್ಕಾರಿ ಅಧಿಕಾರಿಗಳ ಅಕ್ರಮ ಲಂಚ ವಹಿವಾಟು ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.