ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಗೊರೇಬಾಳ ತಾಂಡಾದಲ್ಲಿ ನಡೆದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಪಿ.ಡಿ.ಓ ಮಹ್ಮದ ಖಾಜಾಗೆ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ.
ಗೊರೇಬಾಳ ತಾಂಡಾದ ಚೇತನ (ತಂದೆ ಲೋಕಪ್ಪ) ಅವರು ದನದ ಶೆಡ್ ನಿರ್ಮಿಸಿ ಸರ್ಕಾರದಿಂದ ಸಹಾಯಧನ ಪಡೆಯಬೇಕಾಗಿದ್ದ ಸಂದರ್ಭದಲ್ಲಿ, ಆ ಹಣ ಬಿಡುಗಡೆ ಮಾಡಲು ಪಿ.ಡಿ.ಓ ಮಹ್ಮದ ಖಾಜಾ ಅವರು ₹15,000 ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಚೇತನ ಅವರು ಅಂದಿನ ಎಸಿಬಿ (ACB) ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧಾರವಾಗಿ ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು, ಮಹ್ಮದ ಖಾಜಾ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಟ್ರ್ಯಾಪ್ ನಡೆಸಿ, ಹಣ ಸಮೇತ ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ, ಪೋಲಿಸ್ ಇನ್ಸ್ಪೆಕ್ಟರ್ ಶ್ರೀಧರ ದೊಡ್ಡಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ರಾಯಚೂರು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ, ಭ್ರಷ್ಟಾಚಾರ ತಡೆ ಕಾಯ್ದೆ 1988ರ ಕಲಂ 7 ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ ₹25,000 ದಂಡ, ಹಾಗೆಯೇ ಕಲಂ 13(1)(ಡಿ) ಸಹಿತ 13(2) ಅಡಿಯಲ್ಲಿ 4 ವರ್ಷ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದ್ದಾರೆ. ಒಟ್ಟಾರೆ 7 ವರ್ಷ ಜೈಲು ಶಿಕ್ಷೆ ಹಾಗೂ ₹75,000 ದಂಡ ವಿಧಿಸಲಾಗಿದೆ.
ಇದಲ್ಲದೆ, ವಿಚಾರಣೆಯ ವೇಳೆ ದೂರುದಾರ ಚೇತನ ಅವರು ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನೀಡಿದ ಹಿನ್ನೆಲೆ, ಅವರ ವಿರುದ್ಧ ಸುಳ್ಳು ಸಾಕ್ಷಿ ನೀಡಿದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
