ಪಾಕಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ತೆರಳುತ್ತಿದ್ದ ಭದ್ರತಾ ಪಡೆಗಳ ವಾಹನಗಳ ಮೇಲೆ ಭಾನುವಾರ ಭೀಕರ ದಾಳಿ ನಡೆದಿದ್ದು, 90 ಸೈನಿಕರು ಮೃತಪಟ್ಟಿದ್ದಾರೆ ಎಂದು ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಘೋಷಿಸಿದೆ. ಆದರೆ, ಅಧಿಕೃತ ಮೂಲಗಳ ಪ್ರಕಾರ, ಕನಿಷ್ಠ ಏಳು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, “ಕ್ವೆಟ್ಟಾದಿಂದ ತಫ್ತಾನ್‌ಗೆ ತೆರಳುತ್ತಿದ್ದ ಭದ್ರತಾ ಪಡೆಗಳ ವಾಹನಗಳ ಮೇಲೆ ದಾಳಿ ನಡೆದಿದ್ದು, ಏಳು ಬಸ್‌ಗಳು ಮತ್ತು ಎರಡು ಇತರ ವಾಹನಗಳು ಗುರಿಯಾಗಿವೆ. ಒಂದು ಬಸ್‌ಗೆ ಸ್ಫೋಟಕಗಳಿಂದ ತುಂಬಿದ ವಾಹನವೊಂದು ಡಿಕ್ಕಿ ಹೊಡೆದಿದ್ದು, ಇದು ಆತ್ಮಾಹುತಿ ದಾಳಿಯಾಗಿರಬಹುದು. ಇನ್ನೊಂದು ಬಸ್‌ನ್ನು ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್‌ಗಳಿಂದ (ಆರ್‌ಪಿಜಿ) ಉಡಾಯಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಗಾಯಗೊಂಡವರನ್ನು ತಕ್ಷಣವೇ ರವಾನಿಸಲು ಆರ್ಮಿ ಏವಿಯೇಷನ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದ್ದು, ಪ್ರದೇಶದ ಮೇಲ್ವಿಚಾರಣೆಗೆ ಡ್ರೋನ್‌ಗಳನ್ನೂ ಬಳಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ದಾಳಿಯು ಪಾಕಿಸ್ತಾನದ ಭದ್ರತಾ ಪಡೆಗಳ ವಿರುದ್ಧ ಬಲೂಚ್ ಲಿಬರೇಷನ್ ಆರ್ಮಿಯ ನಿಗದಿತ ದಾಳಿಯಾಗಿದೆ.

ಈ ಆತ್ಮಾಹುತಿ ದಾಳಿಯು ಪಾಕಿಸ್ತಾನದ ಭದ್ರತಾ ವ್ಯವಸ್ಥೆಗೆ ಮತ್ತೊಂದು ದೊಡ್ಡ ಆಘಾತ ನೀಡಿದ್ದು, ಸರ್ಕಾರ ಮತ್ತು ಸೇನೆ ಈ ದಾಳಿಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದೆ.

Related News

error: Content is protected !!