ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ನೀಲಿ ಡ್ರಮ್’ ಎಂಬ ಪದ ಕ್ರೌರ್ಯದ ಸಂಕೇತವಾಗಿ ಹರಿದಾಡುತ್ತಿದೆ. ಇದೇ ಭೀತಿಯ ನಡುವೆ, ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ವಿಚಿತ್ರ ಘಟನೆೊಂದು ಬೆಳಕಿಗೆ ಬಂದಿದೆ. ಪತ್ನಿಯ ಬೆದರಿಕೆಗೆ ಹೆದರಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೇ ಕಳುಹಿಸಿಕೊಟ್ಟಿರುವುದು ಗಮನ ಸೆಳೆದಿದೆ.

ದೌಲತ್ಪುರ ಗ್ರಾಮದ ದಿನಗೂಲಿ ಕಾರ್ಮಿಕ ರಾಜಕುಮಾರ್ ಕಳೆದ ಏಳು ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದರು. ದಂಪತಿಗೆ ಆರು ತಿಂಗಳ ಮಗು ಕೂಡ ಇದೆ. ಆದರೆ, ಅವರ ಪತ್ನಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ.
ಪತ್ನಿಯ ಮೊಬೈಲ್ನಲ್ಲಿ ಪ್ರಿಯಕರನೊಂದಿಗೆ ತೆಗೆದ ಆಕ್ಷೇಪಾರ್ಹ ಫೋಟೋಗಳು ಮತ್ತು ಫೇಸ್ಬುಕ್ನಲ್ಲಿ “ಸಿಮೆಂಟ್ ಮತ್ತು ನೀಲಿ ಡ್ರಮ್” ಎಂಬ ಶೀರ್ಷಿಕೆಯ ಪೋಸ್ಟ್ ಕಂಡು ರಾಜಕುಮಾರ್ ಆತಂಕಗೊಂಡಿದ್ದಾರೆ. ಈ ಪೋಸ್ಟ್ ಹಿಂದಿನ ಮೀರತ್ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ನೆನಪಿಸುವಂತಿತ್ತು.
ಆ ಪ್ರಕರಣದಲ್ಲಿ ಮುಸ್ಕಾನ್ ಎಂಬ ಮಹಿಳೆ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿ ಪತಿಯನ್ನು ಕೊಂದು, ಶವವನ್ನು ನೀಲಿ ಡ್ರಮ್ನಲ್ಲಿ ಇಟ್ಟು ಸಿಮೆಂಟ್ನಿಂದ ಮುಚ್ಚಿದ್ದಳು. ಇದೇ ಘಟನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, “ನೀನು ಅಡ್ಡ ಬಂದರೆ ನಿನ್ನನ್ನೂ ಇದೇ ರೀತಿಯಲ್ಲಿ ಕೊಲ್ಲುತ್ತೇನೆ” ಎಂದು ಪತ್ನಿ ಬೆದರಿಕೆ ಹಾಕಿದ್ದಾಳೆ ಎಂದು ತಿಳಿದುಬಂದಿದೆ.
ಜೀವ ಭಯದಿಂದ ಕಂಗೆಟ್ಟ ರಾಜಕುಮಾರ್ ಪೊಲೀಸರನ್ನು ಸಂಪರ್ಕಿಸಿದ್ದರು. ಬಳಿಕ ಮಹಿಳಾ ಮಧ್ಯಸ್ಥಿಕೆ ಕೇಂದ್ರದಲ್ಲಿ ಕೌನ್ಸೆಲಿಂಗ್ ನಡೆಸಲಾಯಿತು. ಈ ವೇಳೆ ಪತ್ನಿ ಪ್ರಿಯಕರನೊಂದಿಗೆ ಬದುಕುವುದಾಗಿ ಹಠ ಹಿಡಿದಿದ್ದಾಳೆ.
ಕೊನೆಗೆ, ತನ್ನ ಜೀವದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜಕುಮಾರ್ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. “ಆಕೆ ನನಗೆ ಅಡುಗೆ ಮಾಡುತ್ತಿರಲಿಲ್ಲ, ಮಗುವಿನ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸುತ್ತಿರಲಿಲ್ಲ” ಎಂದು ರಾಜಕುಮಾರ್ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
