ಲಖನೌ, ಜುಲೈ 15 – ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳಾ ಕಾರ್ಯಕರ್ತರಿಗೆ ಅಶ್ಲೀಲ ವೀಡಿಯೋಗಳನ್ನು ಕಳುಹಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಸತತ ಕಿರುಕುಳದಿಂದ ಸಿಟ್ಟುಗೊಂಡ ಮಹಿಳೆಯರು ಆತನಿಗೆ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ್ದ ವೈರಲ್ ಆಗಿದೆ.
ಆಗ್ರಾ ಜಿಲ್ಲೆಯ ಖಂಡೌಲಿ ಪ್ರದೇಶದ ನಿವಾಸಿಯಾಗಿರುವ ಆನಂದ್ ಶರ್ಮಾ ಎಂಬಾತ ಮಹಿಳಾ ಕಾರ್ಯಕರ್ತರಿಗೆ ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶಗಳು ಹಾಗೂ ವೀಡಿಯೋಗಳನ್ನು ಕಳುಹಿಸುತ್ತಿದ್ದನು. ಇದರಿಂದ ತೀವ್ರ ಮಾನಸಿಕ ಬಳಲಿಗೆ ಒಳಗಾದ ಮಹಿಳೆಯರು ಕೊನೆಗೆ ತಾವೇ ನ್ಯಾಯ ಕೈಗೆತ್ತಿಕೊಂಡಿದ್ದಾರೆ.
ಹೆಸರು ಬಹಿರಂಗಗೊಳಿಸದಿರುವ ಮಹಿಳಾ ಕಾರ್ಯಕರ್ತರೊಬ್ಬರು ಆತ ದಿನದಿಂದ ದಿನಕ್ಕೆ ಅಶ್ಲೀಲ ಕಂಟೆಂಟ್ ಕಳುಹಿಸುತ್ತಿದ್ದನೆಂದು ಹೇಳಿದ್ದಾರೆ. ಕೆಲ ಮಹಿಳೆಯರು, ಆನಂದ್ ತನ್ನ ಮುಖ ಮುಚ್ಚಿಕೊಂಡು ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಕಳುಹಿಸುತ್ತಿದ್ದನೆಂಬ ಆರೋಪವೂ ಮಾಡಿದ್ದಾರೆ. ಇದು ಪಕ್ಷದ ಮೌಲ್ಯಗಳಿಗೆ ಧಕ್ಕೆಯಾದಂತೆ ಆಗಿದ್ದು, ಕಾರ್ಯಕರ್ತರಲ್ಲಿ ಆಕ್ರೋಶ ಹುಟ್ಟಿಸಿದೆ.
ಘಟನೆಯ ದಿನ ಮಹಿಳೆಯರು ಆನಂದ್‌ನ ಮನೆಗೆ ನುಗ್ಗಿ, ಆತನನ್ನು ಹೊರಗೆಳೆದು ಮಾರುಕಟ್ಟೆಯ ಮಧ್ಯೆ ಚಪ್ಪಲಿಯಿಂದ ಥಳಿಸಿದರು. ಈ ವೇಳೆ ಆನಂದ್ ಪತ್ನಿ ಹಾಗೂ ಸಂಬಂಧಿಕರು ಮಧ್ಯಪ್ರವೇಶಿಸಿ ಮಹಿಳೆಯರಲ್ಲಿ ಕ್ಷಮೆಯಾಚಿಸಿದರು. ಕೊನೆಗೆ ಆನಂದ್ ಶರ್ಮಾ ಆತಂಕದಿಂದ ನಿಶ್ಶಬ್ದನಾಗಿ ಅಲ್ಲಿಂದ ಹೊರಟನು.
ವೈರಲ್ ಆಗಿರುವ ಈ ವಿಡಿಯೋವನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಉಪ್ಮಾ ಗುಪ್ತಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು, “ಮಹಿಳಾ ಕಾರ್ಯಕರ್ತರ ಕಿರುಕುಳದ ವಿರುದ್ಧ ತಕ್ಕ ಪ್ರತಿಕ್ರಿಯೆ ನೀಡಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
