
ಬಿಹಾರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಮಹಿಳಾ ಮತದಾರರ ಮೆಚ್ಚುಗೆ ಗಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ವಿಶಿಷ್ಟ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. “ಪ್ರಿಯದರ್ಶಿನಿ ಉಡಾನ್” ಯೋಜನೆಯಡಿ ರಾಜ್ಯಾದ್ಯಂತ ಐದು ಲಕ್ಷ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ, ಈ ಅಭಿಯಾನ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಿತರಣೆಯಾದ ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್ ಮಾತ್ರವಲ್ಲದೆ, ಅದರ ಒಳಭಾಗದಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಫೋಟೋ ಮುದ್ರಿಸಿರುವುದು ಹೊರಬಿದ್ದಿದೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿಯ ಫೋಟೋ ಹೊಂದಿರುವ ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಅನ್ನು ಅನ್‌ಬಾಕ್ಸ್ ಮಾಡುವ ದೃಶ್ಯವಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಈ ಮೂಲಕ ಕಾಂಗ್ರೆಸ್ಸಿನ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಕಾಂಗ್ರೆಸ್ ಪಕ್ಷದ “ತಗ್ಗಿದ ಮಟ್ಟದ ರಾಜಕೀಯ ಪ್ರಚಾರ” ಎಂದು ವಿಂಗಡಿಸಿದ್ದಾರೆ. “ಮಹಿಳಾ ಸಬಲೀಕರಣ ಹೆಸರಿನಲ್ಲಿ ಈ ರೀತಿಯ ಅಭಿಯಾನ ನಾಚಿಕೆಗೇಡು. ಸ್ಯಾನಿಟರಿ ಪ್ಯಾಡ್‌ನಲ್ಲಿ ನಾಯಕನ ಫೋಟೋ ಬಳಸುವುದು ಮಹಿಳೆಯರ ಗೌರವವನ್ನು ಹಿಮ್ಮೆಟ್ಟಿಸುವಂತದ್ದು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, “ಇದು ಗಂಭೀರ ವಿವಾದವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ವಿರೋಧಿಗಳೂ ಸಹಕಾಂಗ್ರೆಸ್ ನ ಈ ಹೆಜ್ಜೆಯನ್ನು ಗಂಭೀರವಾಗಿ ಟೀಕಿಸುತ್ತಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ವಕ್ತಾರ ನೀರಜ್ ಕುಮಾರ್ ಈ ವಿಚಾರದ ಕುರಿತು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, “ಅಧಿಕಾರದ ಆಸೆಗೆ ಕಾಂಗ್ರೆಸ್ ಎಲ್ಲ ಹದ ಮೀರುತ್ತಿದೆ. ಮಹಿಳಾ ಸಬಲೀಕರಣ ಎಂಬ ಹೆಸರಿನಲ್ಲಿ ಇಂತಹ ಕೆಲಸಗಳು ಸರಿಯಲ್ಲ. ಇದು ಕೇವಲ ಚುನಾವಣಾ ಗಿಮಿಕ್,” ಎಂದು ಆರೋಪಿಸಿದ್ದಾರೆ. ಅವರು ಮುಂದುವರೆದು, “ಬಿಹಾರದ ಮಹಿಳೆಯರು ಗೌರವದ ಸಂಕೇತ. ಅವರ ಸ್ವಾಭಿಮಾನವನ್ನು ಭಂಗಪಡಿಸುವ ಕೆಲಸವನ್ನು ಯಾವುದೇ ರಾಜಕೀಯ ಪಕ್ಷದಿಂದ ನಿರೀಕ್ಷಿಸಲಾರದು,” ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಈ ಅಭಿಯಾನಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇದುವರೆಗೆ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಸತ್ಯಾಸತ್ಯತೆ ಹಾಗೂ ಉದ್ದೇಶದ ಕುರಿತು ಚರ್ಚೆಗಳು ಮುಂದುವರೆದಿವೆ.