ಮಾಧಂಪಟ್ಟಿ ರಂಗರಾಜ್ ಅವರ ಹೊಸ ಜೀವನಸಂಗಾತಿ ಜಾಯ್ ಕ್ರಿಜಿಲ್ಡಾ ತಮ್ಮ ಗರ್ಭಧಾರಣೆಯ ವಿಚಾರವನ್ನೂ ಬಹಿರಂಗಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟಿಸಿದೆ.
ಕಾಲಿವುಡ್ನಲ್ಲಿ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಮತ್ತು ಶೆಫ್ ಆಗಿಯೂ ಖ್ಯಾತಿಯಲ್ಲಿರುವ ಮಾಧಂಪಟ್ಟಿ ರಂಗರಾಜ್, ಫ್ಯಾಷನ್ ಡಿಸೈನರ್ ಜಾಯ್ ಕ್ರಿಜಿಲ್ಡಾ ಅವರೊಂದಿಗೆ ಇತ್ತೀಚೆಗೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಬಂಧನಕ್ಕಿಳಿದಿದ್ದರು. ಮದುವೆಯ ಫೋಟೋಗಳನ್ನು ಜಾಯ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಇದನ್ನು ಅಧಿಕೃತವಾಗಿಸಿ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು.
ಅದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಸಂತೋಷದ ಸುದ್ದಿಯನ್ನು ಜಾಯ್ ಶೇರ್ ಮಾಡಿಕೊಂಡಿದ್ದಾರೆ. “ಬೇಬಿ ಲೋಡಿಂಗ್ 2025… ಈಗಾಗಲೇ ನಾನು 6 ತಿಂಗಳ ಗರ್ಭಿಣಿ” ಎಂಬ ಉಲ್ಲಾಸಭರಿತ ಪೋಸ್ಟ್ ಮೂಲಕ ಸುದ್ದಿ ತಿಳಿಸಿದ್ದಾರೆ. ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಆದರೆ ಈ ನಡುವೆ ಹಲವು ಪ್ರಶ್ನೆಗಳೂ ಕೇಳಿಬರುತ್ತಿವೆ. ಮಾಧಂಪಟ್ಟಿ ರಂಗರಾಜ್ ಅವರಿದು ಎರಡನೇ ಮದುವೆಯಾಗಿದ್ದು, ಅವರ ಮೊದಲ ಪತ್ನಿ ಶ್ರುತಿ ರಂಗರಾಜ್ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದಂಪತಿಯ ಇಬ್ಬರು ಮಕ್ಕಳು ಇವತ್ತಿಗೂ ಶ್ರುತಿ ಅವರ ಜೊತೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಶ್ರುತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎಂಬ ಹೆಸರನ್ನು ಮುಂದುವರಿಸಿದ್ದಾರೆ.
ವಿಚ್ಛೇದನದ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ಇರುವುದರಿಂದ, ಮಾಧಂಪಟ್ಟಿ ರಂಗರಾಜ್ ಹಾಗೂ ಶ್ರುತಿ ಪ್ರತ್ಯೇಕರಾಗಿದ್ದಾರೆ ಎಂಬುದನ್ನು ಅಧಿಕೃತವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ. ಶ್ರುತಿ ಈ ಹೊಸ ಮದುವೆ ಅಥವಾ ಗರ್ಭಧಾರಣೆ ಕುರಿತು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದರಿಂದಾಗಿ ಮಾಧಂಪಟ್ಟಿ ರಂಗರಾಜ್ ಅವರ ವೈಯಕ್ತಿಕ ಜೀವನ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮದುವೆ ಮತ್ತು ತಾಯಿಯಾಗುವ ಸುದ್ದಿ ಒಂದೇ ದಿನ ಬಂದಿರುವ ಈ ಬೆಳವಣಿಗೆ, ಚಲಚಿತ್ರ ಮತ್ತು ಫ್ಯಾಷನ್ ಲೋಕದ ಸುದ್ದಿಯಲ್ಲೇ ಪ್ರಸ್ತುತ ಟಾಪಿಕ್ ಆಗಿ ಪರಿಣಮಿಸಿದೆ.
