ಚೆನ್ನೈ: ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಗುಮ್ಮಿಡಿಪೂಂಡಿ ಪಟ್ಟಣದ ಬಳಿ 10 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಭಯಾನಕ ಘಟನೆ ನಡೆದಿದ್ದು, ಇದರ ಸಿಸಿಟಿವಿ ದೃಶ್ಯಗಳು ವ್ಯಾಪಕವಾಗಿ ಹರಡಿವೆ.
ಘಟನೆ ಶನಿವಾರ (ಜುಲೈ 12) ಬೆಳಿಗ್ಗೆ ಬಾಲಕಿ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಸಂಭವಿಸಿದೆ. ಈ ವೇಳೆ ಒಬ್ಬ ಅಪರಿಚಿತ ವ್ಯಕ್ತಿ ಬಾಲಕಿಯ ಹಿಂದೆ ಹಿಂತಾಲಾಡಿ, ಪೊದೆಗಳ ಕಡೆಗೆ ಎಳೆದೊಯ್ಯಲು ಯತ್ನಿಸಿದ್ದನು. ಬಾಲಕಿ ತಕ್ಷಣ ಚಾಣಾಕ್ಷತನ ತೋರಿಸಿ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದ್ದು, ತಕ್ಷಣವೇ ಈ ಬಗ್ಗೆ ತನ್ನ ಅಜ್ಜಿಗೆ ಮಾಹಿತಿ ನೀಡಿದ್ದಾಳೆ.
ಅಜ್ಜಿಯು ಕೂಡಲೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಘಟನೆಯ ಕುರಿತು ತನಿಖೆ ಆರಂಭವಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಗಳಲ್ಲಿ ಆರೋಪಿಯು ಬಾಲಕಿಯ ಹಿಂದೆ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ನಾಗರಿಕರು ಕಿಡಿಕಾರಿದ್ದಾರೆ.
ಈ ಅಘಾತಕಾರಿ ಘಟನೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ಪೊಲೀಸರು ಕೂಡಲೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಬಾಲಕಿ ತಿರುವಲ್ಲೂರು ಜಿಲ್ಲೆಯ ಸರ್ಕಾರಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿಯಾಗಿ ಗುರುತಿಸಲಾಗಿದ್ದು, ಈ ಘಟನೆ ಪ್ರದೇಶದ ಮಕ್ಕಳ ಭದ್ರತೆ ಕುರಿತು ಗಂಭೀರ ಚಿಂತೆ ಹುಟ್ಟಿಸಿದೆ.
ತಿರುವಲ್ಲೂರು ಜಿಲ್ಲಾ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ತೀವ್ರಗೊಳಿಸಿದ್ದು, ಶೀಘ್ರದಲ್ಲೇ ಆರೋಪಿಯನ್ನು ಪತ್ತೆಹಚ್ಚುವ ಭರವಸೆ ನೀಡಿದ್ದಾರೆ.
