ಐರ್ಲೆಂಡ್‌ನಲ್ಲಿ ಭಾರತೀಯ ಮೂಲದವರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದಾಳಿಗಳು ಆತಂಕ ಹೆಚ್ಚಿಸುತ್ತಿವೆ. ಕಳೆದ ವಾರ 6 ವರ್ಷದ ಬಾಲಕಿ ಮೇಲೆ ನಡೆದ ದಾಳಿಯ ನೆನಪು ಮಸುಕಾಗುವ ಮುನ್ನವೇ, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಈ ಬಾರಿ, 22 ವರ್ಷಗಳಿಂದ ಐರ್ಲೆಂಡ್‌ನಲ್ಲಿ ವಾಸಿಸುತ್ತಿರುವ 51 ವರ್ಷದ ಲಕ್ಷ್ಮಣ್ ದಾಸ್ ಅವರನ್ನು ದುಷ್ಕರ್ಮಿಗಳು ಕ್ರೂರವಾಗಿ ಹಲ್ಲೆ ಮಾಡಿ ದರೋಡೆ ನಡೆಸಿದ್ದಾರೆ.

ಲಕ್ಷ್ಮಣ್ ದಾಸ್, ಐರಿಶ್ ಪ್ರಜೆಯಾಗಿರುವ ಅವರು, ಡಬ್ಲಿನ್‌ನ ಅನಂತರಾ ದಿ ಮಾರ್ಕರ್ ಹೋಟೆಲ್‌ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 6ರ ಬೆಳಿಗ್ಗೆ, ತಮ್ಮ ಇ-ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಮೂವರ ಗುಂಪೊಂದು ಅವರನ್ನು ಗುರಿಯಾಗಿಸಿಕೊಂಡಿತು. ದುಷ್ಕರ್ಮಿಗಳು ಮೊದಲು ಅವರ ದಾರಿಗೆ ಅಡ್ಡ ಬಂದು ಬಲಾತ್ಕಾರವಾಗಿ ಹಲ್ಲೆ ನಡೆಸಿ, ಹೆಲ್ಮೆಟ್ ಒಡೆದಿದ್ದಾರೆ. ಬಳಿಕ, ಅವರ ಫೋನ್, ಕ್ರೆಡಿಟ್ ಕಾರ್ಡ್, ನಗದು ಹಾಗೂ ಎಲೆಕ್ಟ್ರಿಕ್ ಬೈಕ್‌ನ್ನು ದೋಚಿ ಪರಾರಿಯಾಗಿದ್ದಾರೆ.

ಈ ದಾಳಿಯಿಂದ ದಾಸ್ ಅವರ ಕಾಲು, ಕಣ್ಣು, ಭುಜ ಮತ್ತು ತೋಳಿಗೆ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಅವರು ಚಿಕಿತ್ಸೆ ಪಡೆದು ಮನೆ ವಿಶ್ರಾಂತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಇದಕ್ಕೂ ಕೆಲವೇ ದಿನಗಳ ಹಿಂದೆ, ಆಗ್ನೇಯ ಐರ್ಲೆಂಡ್‌ನ ವಾಟರ್‌ಫೋರ್ಡ್ ನಗರದಲ್ಲಿ ವಾಸಿಸುತ್ತಿರುವ, ಕೇರಳ ಮೂಲದ ಅನುಪ ಅಚ್ಯುತನ್ ಅವರ ಆರು ವರ್ಷದ ಮಗಳು ನಿಯಾ ನವೀನ್ ಮೇಲೆ ಹಲ್ಲೆ ನಡೆದಿತ್ತು. ಆ ಸಂದರ್ಭದಲ್ಲಿ ಹಲ್ಲೆಗಾರರು “ಭಾರತಕ್ಕೆ ಹೋಗಿ” ಎಂದು ಕೂಗಿದ್ದರು.

ಈ ಎರಡೂ ಘಟನೆಗಳು ಸ್ಥಳೀಯ ಭಾರತೀಯ ಸಮುದಾಯದಲ್ಲಿ ಆತಂಕ ಹಾಗೂ ಅಸುರಕ್ಷತೆ ಮೂಡಿಸಿದ್ದು, ಐರ್ಲೆಂಡ್‌ನಲ್ಲಿ ವಾಸಿಸುವ ವಲಸಿಗರ ಸುರಕ್ಷತಾ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!