
ತಿರುವನಂತಪುರ: ತಾಯಿಯ ಮೇಲೆ ನಂಬಲಾರದ ಘಾತಕತೆಗೆ ಹೆಸರಾಗಿದೆ ತಿರುವನಂತಪುರದ ತೆಕ್ಕಡ ಪ್ರದೇಶ. ಇಲ್ಲಿ ಮದ್ಯದ ಅಮಲಿನಲ್ಲಿ ಮಗನೊಬ್ಬ ತಾಯಿಯನ್ನೇ ಕ್ರೂರವಾಗಿ ತುಳಿದು ಕೊಂದಿರುವ ಭೀಕರ ಘಟನೆ ನಡೆದಿದೆ.
ಮೃತ ದುರ್ದೈವಿ ಓಮನಾ (85), ತೆಕ್ಕಡ ನಿವಾಸಿಯಾಗಿದ್ದು, ಆರೋಪಿ ಆಕೆಯ ಪುತ್ರ ಮಣಿಕಂದನ್ ಎಂದು ಗುರುತಿಸಲಾಗಿದೆ. ಮದ್ಯವ್ಯಸನಿಯಾಗಿದ್ದ ಮಣಿಕಂದನ್ ಸದಾ ಮದ್ಯ ಸೇವನೆಯಲ್ಲೇ ಮುಳುಗಿದ್ದ ಎನ್ನಲಾಗಿದೆ.
ಮಂಗಳವಾರ ರಾತ್ರಿ ಸುಮಾರು 10:30ಕ್ಕೆ ಗರಿಷ್ಠ ಮದ್ಯ ಸೇವನೆ ಮಾಡಿಕೊಂಡು ಮನೆಗೆ ಬಂದಿದ್ದ ಮಣಿಕಂದನ್, ತಾಯಿ ಓಮನಾರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದ. ನಂತರ ಅಮಲಿನಲ್ಲಿಯೇ ತನ್ನ ತಾಯಿಯನ್ನು ಅಮಾನವೀಯವಾಗಿ ತಳ್ಳಿದ, ಒದಿದ ಹಾಗೂ ಕಾಲಿನಿಂದ ತುಳಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಓಮನಾಳನ್ನು ಸ್ಥಳೀಯರು ತಕ್ಷಣವೇ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ವೈದ್ಯಕೀಯ ವರದಿಯ ಪ್ರಕಾರ ಮಣಿಕಂದನ್‌ನ ಹಿಂಸಾತ್ಮಕ ದಾಳಿಯಿಂದ ಓಮನಾಳ ಅನೇಕ ಮೂಳೆಗಳು ಮುರಿದಿದ್ದು, ಈ ಅವಸ್ಥೆಯೇ ಸಾವಿಗೆ ಕಾರಣವಾಗಿದೆಯೆಂದು ತಿಳಿದು ಬಂದಿದೆ.
ಘಟನೆಯ ಕುರಿತು ತಿರುವನಂತಪುರದ ವಟ್ಟಪ್ಪರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಣಿಕಂದನ್ ಈಗ ಪೊಲೀಸರು ಬಂಧನದಲ್ಲಿದ್ದಾರೆ. ತನಿಖೆ ಮುಂದುವರಿದಿದೆ.