ಸತಾರ ಜಿಲ್ಲೆಯ ಬಸಪ್ಪ ಪೇಠದ ಕರಂಜೆ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. 18 ವರ್ಷದ ಯುವಕನೊಬ್ಬ, ಪ್ರೇಮ ನಿರಾಕರಣೆ ಮಾಡಿದ 10ನೇ ತರಗತಿಯ ಬಾಲಕಿಯನ್ನು ಚಾಕುವಿನಿಂದ ಬೆದರಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ವಿಡಿಯೋದಲ್ಲಿ ಬಾಲಕಿಯು ಆತಂಕದಿಂದ ಕಿರುಚುತ್ತಿದ್ದರೂ, ಆರೋಪಿ ನಿರಾಳವಾಗಿ ಚಾಕು ತೋರಿಸುತ್ತಿರುವುದು ದೃಶ್ಯವಾಗಿದ್ದು, “ಹಾಕುತ್ತೇನೆ” ಎಂದು ನಿರಂತರ ಬೆದರಿಕೆ ಹಾಕುತ್ತಿದ್ದಾನೆ. ಈ ದೃಶ್ಯ ಕಂಡ ಸ್ಥಳೀಯರು ಆತನನ್ನು ತಡೆಹಿಡಿಯಲು ಯತ್ನಿಸಿದರೂ, ಯಾವ ಮಾತನ್ನೂ ಕೇಳದೆ ಆತ ಬಾಲಕಿಗೆ ಹಾನಿ ಮಾಡಲಿದ್ದ.
ಮೂಲಗಳ ಪ್ರಕಾರ, ಆರೋಪಿ ಹಲವು ದಿನಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಮತ್ತು ಪ್ರೇಮ ನೀಡಿದ ಬಗ್ಗೆ ಒತ್ತಾಯಿಸುತ್ತಿದ್ದ. ಆದರೆ ಬಾಲಕಿಯು ಸ್ಪಷ್ಟವಾಗಿ ನಿರಾಕರಿಸಿದ್ದಳು. ಇದರಿಂದ ಅಸಹನೆಗೊಂಡಿದ್ದ ಆರೋಪಿ ಈ ಅಪಾಯಕಾರಿ ಹೆಜ್ಜೆ ಇಟ್ಟಿದ್ದಾನೆ.
ಆತನ ಹುಚ್ಚಾಟ ನೋಡಿದ ಸ್ಥಳೀಯರು ಭೀತಿಯಿಂದ ಪಾರು ಆಗುವ ಮಾರ್ಗ ಹುಡುಕುತ್ತಿದ್ದರು. ಈ ವೇಳೆ, ಗೇಟಿನ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಯುವಕನ ಮೇಲೆ ಹಠಾತ್ ದಾಳಿ ಮಾಡಿ ನಿಯಂತ್ರಣಕ್ಕೆ ತಂದಿದ್ದಾರೆ. ನಂತರ ಸ್ಥಳೀಯ ಜನರು ಗುಂಪಾಗಿ ಆತನಿಗೆ ಬಿಸಿ ಮುಟ್ಟಿಸಿದ್ದಾರೆ ಹಾಗೂ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ. ಈ ಘಟನೆಯಿಂದ ಮುಂಜಾಗ್ರತಾ ಕ್ರಮಗಳ ಅಗತ್ಯತೆ ಮತ್ತೊಮ್ಮೆ ಬಹಿರಂಗವಾಗಿದೆ.
