
ನೇಪಿಡಾ: ಮ್ಯಾನ್ಮಾರ್‌ನ ಸಾಗೈಂಗ್ ಪ್ರದೇಶದ ಲಿನ್ ಟಾ ಲು ಗ್ರಾಮದಲ್ಲಿ ಇರುವ ಬೌದ್ಧ ಮಠವೊಂದರ ಮೇಲೆ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 23 ನಾಗರಿಕರು ಬಲಿಯಾಗಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಈ ದಾಳೆಯಲ್ಲಿ ಮೃತಪಟ್ಟವರಲ್ಲಿ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಮಾರಕ ದಾಳಿ ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ನಡೆದಿದ್ದು, ಫೈಟರ್ ಜೆಟ್‌ಗಳಿಂದ ಮಠದ ಕಟ್ಟಡದ ಮೇಲೆ ಸ್ಫೋಟಕ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿದ್ದಾರೆ. ದಾಳಿಯ ತೀವ್ರತೆಯಿಂದ ಮಠದಲ್ಲಿ ಆಶ್ರಯ ಪಡೆದಿದ್ದ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರ ಪೈಕಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಸಾಗೈಂಗ್ ಪ್ರದೇಶದಲ್ಲಿ ಇತ್ತೀಚೆಗೆ ಮ್ಯಾನ್ಮಾರ್ ಸೇನೆ ಮತ್ತು ಸ್ಥಳೀಯ ಪ್ರತಿಪಕ್ಷ ಗುಂಪುಗಳ ನಡುವೆ ಬಿಕ್ಕಟ್ಟು ತೀವ್ರಗೊಂಡಿದ್ದು, ದೌರ್ಜನ್ಯ ಭೀತಿಯಿಂದ ನೂರಾರು ಗ್ರಾಮಸ್ಥರು ಜೀವ ರಕ್ಷಣೆಗಾಗಿ ಈ ಮಠದಲ್ಲಿ ಆಶ್ರಯ ಪಡೆದಿದ್ದರು. ದಾಳಿಯ ವೇಳೆ ಸುಮಾರು 150ಕ್ಕೂ ಹೆಚ್ಚು ಜನರು ಮಠದೊಳಗೆ ಇದ್ದರು ಎನ್ನಲಾಗುತ್ತಿದೆ.
ಇದೊಂದು ಮಾನವೀಯ ಶೋಕಾಂತಿಕೆಯಾಗಿ ಪರಿಗಣಿಸಲಾಗುತ್ತಿದೆ. ಮಠಗಳು ಯಾವುದೇ ಸಮರ ತಂತ್ರದ ಭಾಗವಾಗದ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿದ್ದು, ಇವುಗಳ ಮೇಲೆ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಉಲ್ಲಂಘನೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಕಿಡಿಕಾರಿದ್ದಾರೆ.
ದಾಳಿ ಬೆನ್ನಲ್ಲೇ ಈ ಘಟನೆಯ ಕುರಿತಂತೆ ಅಂತರರಾಷ್ಟ್ರೀಯ ಪ್ರತಿಕ್ರಿಯೆ ಮೂಡಿದ್ದು, ಯುದ್ಧ ನಿರೋಧಕ ಸಂಘಟನೆಗಳು ಸೂಕ್ತ ತನಿಖೆ ಮತ್ತು ಕ್ರಮದ ಆಗ್ರಹ ಹೊರಡಿಸಿವೆ. ಮ್ಯಾನ್ಮಾರ್ ಸೈನ್ಯದ ವಿರುದ್ಧ ಈಗಾಗಲೇ ಹಲವು ಆರೋಪಗಳು ಇರುವ ನಡುವೆಯೇ ಈ ಘಟನೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಲಿದೆ.