ಶಿರಸಿ: ಮೂರು ದಶಕಗಳ ಕಾಲ ನ್ಯಾಯದ ಮೊರೆ ತಪ್ಪಿಸಿದ್ದ ಅಪಘಾತದ ಆರೋಪಿ ಅಂತಿಮವಾಗಿ ಶಿರಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 1992ರ ಅಪಘಾತ ಸಂಬಂಧಿತ ಪ್ರಕರಣದಲ್ಲಿ 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಕೊನೆಗೂ ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತನನ್ನು ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಮಾರ್ಶಲ್ ಕ್ಯಾಸ್ತಲಿನ್ ಲೂಯಿಸ್ ಕ್ಯಾಸ್ತಲಿನ್ (62) ಎಂದು ಗುರುತಿಸಲಾಗಿದೆ. 1992ರ ಜೂನ್ 6ರಂದು ಶಿರಸಿಯ ಐದು ರಸ್ತೆ ಸರ್ಕಲ್ ಬಳಿ ನಡೆದ ದುರಂತದಲ್ಲಿ ಈತ ಭಾಗಿಯಾಗಿದ್ದ. ಆ ದಿನ ಲೂಯಿಸ್ ಚಲಾಯಿಸುತ್ತಿದ್ದ ವಾಹನ, ಸೈಕಲ್ ಮೇಲೆ ಹೋಗುತ್ತಿದ್ದ ಶಿರಸಿ ಕೆಡಿಸಿಸಿ ಬ್ಯಾಂಕ್‌ನ ವಾಹನ ಚಾಲಕ ವಾಸು ಗಾವಡಿಗೆ ಡಿಕ್ಕಿ ಹೊಡೆದು, ಅವರ ಸಾವಿಗೆ ಕಾರಣವಾಗಿತ್ತು.

ಘಟನೆ ಸಂಬಂಧ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆರೋಪಿಯು ನಂತರ ನ್ಯಾಯಾಲಯದ ಮುಂಭಾಗ ಹಾಜರಾಗದೆ ಪರಾರಿಯಾಗಿದ್ದ. 33 ವರ್ಷಗಳ ಕಾಲ ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ ಆತನ ಸುಳಿವು ಸಿಗದಿದ್ದಂತಾಯಿತು. ಆದರೆ ಹತಾಶೆಯಾಗದೆ ತನಿಖೆಯನ್ನು ಮುಂದುವರೆಸಿದ್ದ ಪೊಲೀಸರು ಸೋಮವಾರ (ಜೂನ್ 17) ಮೂಡಬಿದ್ರೆಯ ನಿಡ್ಡೊಡಿ ಎಂಬಲ್ಲಿಯೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬೃಹತ್ ಕಾರ್ಯಾಚರಣೆಗೆ ಡಿವೈಎಸ್ಪಿ ಗೀತಾ ಪಾಟೀಲ್ ಮತ್ತು ಸಿಪಿಐ ಶಶಿಕಾಂತ್ ವರ್ಮಾ ನೇತೃತ್ವ ವಹಿಸಿದ್ದು, ಪಿಎಸ್‌ಐಗಳಾದ ನಾಗಪ್ಪ ಬಿ ಹಾಗೂ ನಾರಾಯಣ ರಾಥೋಡ ಅವರ ಮಾರ್ಗದರ್ಶನದಲ್ಲಿಯೇ ತಂಡ ಕಾರ್ಯನಿರ್ವಹಿಸಿತು. ಸಿಬ್ಬಂದಿಗಳಾದ ನೆಲ್ಸನ್ ಮೆಂಥೋರೊ, ವಿಶ್ವನಾಥ ಬಂಡಾರಿ, ಹನುಮಂತ ಕಬಾಡಸಿ, ಅರುಣ ಲಮಾಣಿ, ಸದ್ದಾಂ ಹುಸೆನ್ ಬಿ ಮತ್ತು ಚನ್ನಬಸಪ್ಪ ಕ್ಯಾರಕಟ್ಟಿ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂರು ದಶಕಗಳ ಕಾಲ ನ್ಯಾಯವಿಧಾನದ ಕೈ ತಪ್ಪಿಸಿ ಓಡಿದ ಆರೋಪಿ, ಇದೀಗ ನ್ಯಾಯದ ಅಂಗಳಕ್ಕೆ ಎಳೆಯಲ್ಪಟ್ಟಿರುವುದು ಶಿರಸಿ ಪೊಲೀಸರ ತಾಳ್ಮೆ, ಕೌಶಲ್ಯದ ಫಲಿತಾಂಶವಾಗಿದೆ.

Related News

error: Content is protected !!