
ಮಧ್ಯಪ್ರದೇಶದ ಕಟ್ನಿ ರೈಲು ನಿಲ್ದಾಣದಲ್ಲಿ ಇಳಿಯಬೇಕಿದ್ದ 28 ವರ್ಷದ ಅರ್ಚನಾ ತಿವಾರಿ ಎಂಬ ಯುವತಿ ಆಗಸ್ಟ್ 7ರಂದು ನಿಗೂಢವಾಗಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಅರ್ಚನಾ, ಇಂದೋರ್–ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಊರಿಗೆ ಹೊರಟಿದ್ದರು.
ಮಾಹಿತಿ ಪ್ರಕಾರ, ಅರ್ಚನಾ ಇಂದೋರ್‌ನಿಂದ ಬೆಳಿಗ್ಗೆ ಹೊರಟು ಬಿ–3 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಭೋಪಾಲ್ ಸಮೀಪ ಬಂದಾಗ, ಬೆಳಗ್ಗೆ 10.15ರ ಸುಮಾರಿಗೆ ಅವರು ಮನೆಯವರೊಂದಿಗೆ ಕೊನೆಯದಾಗಿ ಫೋನ್‌ನಲ್ಲಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ತಾವು ಭೋಪಾಲ್ ಹತ್ತಿರ ಇದ್ದೇವೆ ಎಂದು ತಿಳಿಸಿದ್ದಾರೆ. ಆ ಬಳಿಕ ಅವರ ಫೋನ್ ಸ್ವಿಚ್‌ಆಫ್ ಆಗಿದೆ.
ರೈಲು ಕಟ್ನಿ ನಿಲ್ದಾಣ ತಲುಪಿದಾಗ, ಅವರು ಇಳಿಯದೇ ಇರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಆತಂಕಗೊಂಡರು. ತಕ್ಷಣವೇ ಪಕ್ಕದ ಉಮಾರಿಯಾ ನಗರದಲ್ಲಿ ವಾಸಿಸುವ ಸಂಬಂಧಿಕರಿಗೆ ಮಾಹಿತಿ ನೀಡಿ ಹುಡುಕಾಟ ಪ್ರಾರಂಭಿಸಲಾಯಿತು. ಉಮಾರಿಯಾ ನಿಲ್ದಾಣದಲ್ಲಿ ಅವರ ಕೋಚ್‌ಗೆ ಹೋದ ಸಂಬಂಧಿಕರು ಅರ್ಚನಾದ ಪ್ರಯಾಣ ಬ್ಯಾಗ್ ಪತ್ತೆ ಹಚ್ಚಿದರು. ಆದರೆ ಅರ್ಚನಾ ಅಲ್ಲಿ ಇರಲಿಲ್ಲ.
ಈ ಘಟನೆ ಕುರಿತು ಕಟ್ನಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೈಲ್ವೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಅನಿಲ್ ಮರಾವಿ ಅವರು, “ಅರ್ಚನಾ ಕೊನೆಯದಾಗಿ ಭೋಪಾಲ್‌ನ ರಾಣಿ ಕಮಲಪತಿ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಅವರನ್ನು ಬೇರೆ ಯಾವುದೇ ಪ್ರಯಾಣಿಕರು ನೋಡಿಲ್ಲ” ಎಂದು ತಿಳಿಸಿದ್ದಾರೆ.
ಪ್ರಸ್ತುತ ರೈಲ್ವೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಸಿಟಿವಿ ದೃಶ್ಯಾವಳಿ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀವ್ರ ತನಿಖೆ ಆರಂಭಿಸಿದ್ದಾರೆ. ಈ ನಾಪತ್ತೆ ಪ್ರಕರಣವು ಸ್ಥಳೀಯರಲ್ಲೂ ಕುತೂಹಲ ಹಾಗೂ ಆತಂಕ ಮೂಡಿಸಿದೆ.