
ಜಾರ್ಖಂಡ್‌ನ ನೊಮುಂಡಿಯಲ್ಲಿ ವಿಚಿತ್ರ ಕಳ್ಳತನ ಪ್ರಕರಣವೇ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡಿದ ಯುವಕನೊಬ್ಬ ದೇವಾಲಯದೊಳಗೆ ನುಗ್ಗಿ ಕಳ್ಳತನ ಮಾಡಿದ್ದ ವೇಳೆ ಕುಡಿದ ಮತ್ತಿನಲ್ಲಿ ಅಲ್ಲೇ ಮಲಗಿ ಬಿದ್ದ ಘಟನೆ ಬೆಳಗಿನ ಜಾವ ಬಹಿರಂಗವಾಗಿದೆ.
ರಾತ್ರಿ ಹೆಚ್ಚು ಮದ್ಯ ಸೇವಿಸಿದ ವೀರ್ ನಾಯಕ್ ಎಂಬ ಯುವಕ, ತನ್ನ ಸ್ನೇಹಿತರೊಂದಿಗೆ ಕುಡಿದು ತಿರುಗಾಡುತ್ತಿದ್ದ. ನಂತರ ನೊಮುಂಡಿಯಲ್ಲಿರುವ ಕಾಳಿ ದೇವಾಲಯದ ಗೋಡೆಯ ಮೇಲೆ ಹತ್ತಿ, ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾನೆ. ದೇವಾಲಯದ ಒಳಗಡೆ ಪ್ರವೇಶಿಸಿದ ನಂತರ, ಅಲಂಕಾರ ಸಾಮಗ್ರಿಗಳು, ಗಂಟೆ, ಪೂಜಾ ಥಾಲಿ, ಚಿನ್ನ–ಬೆಳ್ಳಿ ಆಭರಣಗಳು ಮತ್ತು ದೇವರ ಕಿರೀಟವನ್ನೂ ಸೇರಿ ಹಲವಾರು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾನೆ.
ಕದ್ದ ವಸ್ತುಗಳನ್ನು ತನ್ನ ಬ್ಯಾಗಿನಲ್ಲಿ ತುಂಬಿಕೊಂಡು ದೇವಾಲಯದಿಂದ ಪಲಾಯನಗೊಳ್ಳಲು ಸಿದ್ಧತೆ ನಡೆಸುತ್ತಿದ್ದ ಆತನಿಗೆ ಮದ್ಯದ ನಿಂದ್ರೆ ಕಾಡಿದ್ದು, ಅಲ್ಲಿಯೇ ಮಲಗಿ ಹೋಗಿದ್ದಾನೆ. ಬೆಳಿಗ್ಗೆ ದೇವಾಲಯಕ್ಕೆ ಆಗಮಿಸಿದ ಅರ್ಚಕರು ಮತ್ತು ಭಕ್ತರು ಈ ದೃಶ್ಯವನ್ನು ನೋಡಿ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇವರ ಕಿರೀಟವನ್ನು ಹಿಡಿದು ಮಲಗಿದ್ದ ವೀರ್ ನಾಯಕ್‌ನ ಫೋಟೋಗಳು ಈಗ ಹಬ್ಬಿಹೋಗಿವೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಕಳ್ಳನನ್ನು ಬಂಧಿಸಿ, ದೇವಾಲಯದಿಂದ ಕಳವು ಮಾಡಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ತನಿಖೆ ಮುಂದುವರೆದಿದ್ದು, ಈತನ ಹಿಂದೆ ಇನ್ನೂ ಯಾರಾದರೂ ಸೇರಿಕೊಂಡಿರಬಹುದಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.