ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮರ್ಮವಿದ್ರಾವಕ ಘಟನೆ ನಡೆದಿದೆ. ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಶೀಲಾರವರ ಪುತ್ರ ಪ್ರಜ್ವಲ್ ಎನ್ನುವ ಬಾಲಕನೇ ಈ ದುರ್ಘಟನೆಯ ಬಲಿಯಾದವನಾಗಿದ್ದಾರೆ.

ಆಟದ ನಡುವೆ ಹುಟ್ಟಿದ ಆತಂಕ, ಆ ಬಳಿಕ ದುಃಖಾಂತ:

ಪ್ರಜ್ವಲ್ ತನ್ನ ಸಂಬಂಧಿಕ ಅಭಿಷೇಕ್ ಎಂಬ ಬಾಲಕನೊಂದಿಗೆ ಆಟವಾಡುತ್ತಿದ್ದ ಸಂದರ್ಭ, ಆಕಸ್ಮಿಕವಾಗಿ ಅಭಿಷೇಕ್ ಪೆಟ್ಟಿಗೆ ಒಳಗಾಗುತ್ತಾನೆ. ಗಾಯಗೊಂಡ ಅಭಿಷೇಕ್‌ನ ಪೋಷಕರು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಈ ಎಲ್ಲದರಿಂದ ಆತಂಕಿತನಾದ ಪ್ರಜ್ವಲ್, “ನನ್ನಿಂದ ಅವನಿಗೆ ಹಾನಿಯಾದ್ದರಿಂದ ಯಾವುದೇ ಗಂಭೀರ ಪರಿಣಾಮವಾಗಬಹುದೆ?” ಎಂಬ ಭೀತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಳ್ಳುವಂತಹ ಕೃತ್ಯಕ್ಕೆ ಮುಂದಾಗಿದ್ದಾನೆ.

ಅಕ್ಕಪಕ್ಕದವರು ತಕ್ಷಣ ಗಮನಿಸಿ ಪ್ರಜ್ವಲ್‌ನ್ನು ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು. ಆದರೆ, ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಪ್ರಜ್ವಲ್ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಸಂಬಂಧ ಪ್ರಜ್ವಲ್‌ನ ಸೋದರ ಮಾವ ರಂಗಸ್ವಾಮಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಪ್ರಜ್ವಲ್ ಕುಟುಂಬವನ್ನಷ್ಟೇ ಅಲ್ಲ, ಸಂಪೂರ್ಣ ಹಳ್ಳಿಯನ್ನು ಆಘಾತಕ್ಕೆ ಒಳಪಡಿಸಿದೆ. ಬಾಲಮನಸ್ಸು ಅಂಥದ್ದೇ — ತಕ್ಷಣದ ಭಯ ಮತ್ತು ಗಿಲ್ಟಿಯಿಂದ ಭಾರೀ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂಬ ಕಠೋರ ನೈಜತೆಯನ್ನು ಈ ಘಟನೆಯು ಹೊರಹಾಕಿದೆ.

Leave a Reply

Your email address will not be published. Required fields are marked *

Related News

error: Content is protected !!