ಧಾರ್ (ಜೂನ್ 25): ಮದ್ಯ ಸೇವಿಸಿ ಶಾಲೆಗೆ ಹಾಜರಾದ ಶಿಕ್ಷಕಿ ಶಾಲಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣ ಧಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಜೂನ್ 23 ರಂದು ಧಾರ್‌ನ ಮನವಾರ್ ವಿಭಾಗದ ಸಿಂಘಾನಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮದ್ಯಪಾನದ ಸ್ಥಿತಿಯಲ್ಲಿ ಶಾಲೆಗೆ ಬಂದ ಶಿಕ್ಷಕಿ ಸಹೋದ್ಯೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಈ ಸಂಬಂಧದ ದೃಶ್ಯಗಳು ವೈರಲ್ ಆಗಿವೆ.
ವಿಡಿಯೋ ಪ್ರಾಥಮಿಕ ಶಿಕ್ಷಣ ಇಲಾಖೆಯು ತಕ್ಷಣ ಕ್ರಮ ಕೈಗೊಂಡಿದ್ದು, ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಬುಡಕಟ್ಟು ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ನರೋತ್ತಮ್ ವರ್ಕಾಡೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಶಿಕ್ಷಕಿಯ ವರ್ತನೆಗೆ ಸಂಬಂಧಿಸಿದಂತೆ ಇಲಾಖೆ ಮಟ್ಟದಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಸೂಚನೆಯಂತೆ ಮನವಾರ್ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕಿಶೋರ್ ಕುಮಾರ್ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು, ಮುಂದಿನ ಕ್ರಮ ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
