
ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಬಾಗಿದ್ದು ಧರೆಗುರುಳುವ ಹಂತದಲ್ಲಿದೆ. ಚಿಗಳ್ಳಿ ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದ ಹತ್ತಿರ ಮೂಡಸಾಲಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬವು ನೆಲಕ್ಕುರುವ ಹಂತದಲ್ಲಿದ್ದು ಸಂಬಂಧಿಸಿದ ಹೆಸ್ಕಾಂ ಸಿಬ್ಬಂದಿಗಳು ಆದಷ್ಟು ಬೇಗ ಈ ವಿದ್ಯುತ್ ಕಂಬವನ್ನು ನೆಲಕ್ಕೆ ಬೀಳುವ ಮುಂಚೆಯೇ ಸರಿಪಡಿಸಬೇಕು ಇಲ್ಲವಾದಲ್ಲಿ ಆ ಕಂಬದ ಜೊತೆಗೆ ಮತ್ತೆ ಮೂರು ಕಂಬಗಳು ಸಹ ಅದರ ಜೊತೆಗೆ ನೆಲಕ್ಕುರುಳಬಹುದು.
ಈ ವಿದ್ಯುತ್ ಕಂಬವು ರಸ್ತೆಯ ಪಕ್ಕದಲ್ಲಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಥವಾ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ ತೊಂದರೆ ಉಂಟಾಗಬಹುದು ಜೊತೆಗೆ ವಿದ್ಯುತ್ ಕಂಬ ಬೀಳುವುದಕ್ಕಿಂತ ಮುಂಚೆ ಇನ್ನೂ ಸ್ವಲ್ಪ ಬಾಗಿದರೆ ರಸ್ತೆಯ ಇನ್ನೊಂದು ಬದಿಗಿರುವ ಬೃಹತ್ ಆಲದ ಮರಕ್ಕೆ ತಾಗಿ ಪಕ್ಕದಲ್ಲಿರುವ ಮನೆಗೂ ಸಹ ಹಾನಿಯಾಗಬಹುದು.