
ರಾಜಸ್ಥಾನ: ಜಿಮ್ನಲ್ಲಿ ಕಟ್ಟುಮಸ್ತಾದ ದೇಹದಂಡನೆ ಪ್ರದರ್ಶಿಸುವ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿ 82 ವರ್ಷದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಸುಲಿಗೆ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಸಹಚರರ ಗ್ಯಾಂಗ್ ಅನ್ನು ರಾಜಸ್ಥಾನದ ಸಿಕರ್ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯ ಖಾಸಗಿ ಕ್ಷಣಗಳ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ಮೇಲ್ ಮಾಡಿದ್ದ ಆರೋಪದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಜಿಮ್ ಬಾಡಿ ತೋರಿಸಿ ವೃದ್ಧನಿಗೆ ಗಾಳ ಹಾಕಿದ ಮಹಿಳೆ!
ರಾಜಸ್ಥಾನದ ಸಿಕರ್ ಮೂಲದ 82 ವರ್ಷದ ಉದ್ಯಮಿಗೆ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ತನ್ನ ಜಿಮ್ ವರ್ಕೌಟ್ ಹಾಗೂ ಕಟ್ಟುಮಸ್ತಾದ ದೇಹದ ಫೋಟೋ, ವಿಡಿಯೋಗಳನ್ನು ತೋರಿಸುವ ಮೂಲಕ ಉದ್ಯಮಿಯನ್ನು ಆಕರ್ಷಿಸಿದ್ದಳು. ಬಳಿಕ ಆತನೊಂದಿಗೆ ಖಾಸಗಿಯಾಗಿ ಭೇಟಿಯಾಗಲು ಆರಂಭಿಸಿದ್ದಳು. ಈ ಭೇಟಿಗಳ ಸಂದರ್ಭದಲ್ಲಿ ಉದ್ಯಮಿಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು ಎನ್ನಲಾಗಿದೆ.
₹2 ಲಕ್ಷ ಕೊಟ್ಟರೂ ಮುಗಿಯದ ಸುಲಿಗೆ ಕಾಟ!
ಕೆಲವು ದಿನಗಳ ಬಳಿಕ ಇದೇ ಖಾಸಗಿ ವಿಡಿಯೋಗಳನ್ನು ಮುಂದಿಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದಳು. ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮಾನ-ಮರ್ಯಾದೆಗೆ ಅಂಜಿದ ಉದ್ಯಮಿ ಆರಂಭದಲ್ಲಿ ₹2 ಲಕ್ಷ ಹಣ ನೀಡಿದ್ದರು. ಆದರೆ, ಹಣ ಪಡೆದ ಬಳಿಕವೂ ಮಹಿಳೆಯ ದುರಾಸೆ ಕಡಿಮೆಯಾಗಿರಲಿಲ್ಲ. ಕೇವಲ ಒಂದು ವಾರದ ಅಂತರದಲ್ಲಿ ಮತ್ತೆ ಉದ್ಯಮಿಗೆ ಕರೆ ಮಾಡಿ ಬರೋಬ್ಬರಿ ₹10 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಳು.
ಪೊಲೀಸರಿಗೆ ದೂರು; ಖೆಡ್ಡಾಕ್ಕೆ ಬಿದ್ದ ‘ಮೇಮ್ಸಾಹೇಬ್’ ಗ್ಯಾಂಗ್!
ಮಹಿಳೆಯ ನಿರಂತರ ಬ್ಲ್ಯಾಕ್ಮೇಲ್ ಹಾಗೂ ಹಣದ ಬೇಡಿಕೆಯಿಂದ ಬೇಸತ್ತ ಉದ್ಯಮಿ ಕೊನೆಗೂ ಧೈರ್ಯ ಮಾಡಿ ಪೊಲೀಸರ ಮೊರೆ ಹೋಗಿದ್ದಾರೆ. ತಮಗಾದ ಅನ್ಯಾಯದ ಕುರಿತು ಸಂಪೂರ್ಣ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಸಿಕರ್ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಹನಿಟ್ರ್ಯಾಪ್ ಜಾಲದ ಮಹಿಳೆ ಹಾಗೂ ಆಕೆಯ ಸಹಚರರನ್ನು ಬಂಧಿಸಿದ್ದಾರೆ. ಅಲ್ಲದೆ, ಉದ್ಯಮಿಯಿಂದ ಈಗಾಗಲೇ ಸುಲಿಗೆ ಮಾಡಿದ್ದ ₹2 ಲಕ್ಷ ನಗದನ್ನೂ ವಶಪಡಿಸಿಕೊಂಡಿದ್ದಾರೆ.
82 ವರ್ಷದ ಉದ್ಯಮಿಯನ್ನು ಗುರಿಯಾಗಿಸಿಕೊಂಡು ಜಿಮ್ ಬಾಡಿ ಪ್ರದರ್ಶನದ ಮೂಲಕ ಪರಿಚಯ ಬೆಳೆಸಿ, ಖಾಸಗಿ ವಿಡಿಯೋಗಳನ್ನೇ ಸುಲಿಗೆಗೆ ಅಸ್ತ್ರವನ್ನಾಗಿಸಿಕೊಂಡಿದ್ದ ಈ ಪ್ರಕರಣ ಇದೀಗ ರಾಜಸ್ಥಾನದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






