
ಕುಮಟಾ: ಮೊಬೈಲ್ ಖರೀದಿಸಿ ಫೋನ್ಪೇ ಮೂಲಕ ಹಣ ಪಾವತಿಸಿರುವುದಾಗಿ ನಕಲಿ ಸಂದೇಶ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ ಕುಮಟಾದ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಮಾತೋಶ್ರೀ ಏಜೆನ್ಸಿಸ್ ಮೊಬೈಲ್ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ರಿಯಲ್ಮಿ ಸಿ-100 ಎಕ್ಸ್ (4/64 ಜಿಬಿ) ಮೊಬೈಲ್ ಖರೀದಿಸಿದ್ದನು. ಮೊಬೈಲ್ನ ಒಟ್ಟು ಬೆಲೆ ₹16,700 ಅನ್ನು ಫೋನ್ಪೇ ಮೂಲಕ ಪಾವತಿಸಿರುವುದಾಗಿ ಮೊಬೈಲ್ನಲ್ಲಿ ನಕಲಿ ಸಂದೇಶ ತೋರಿಸಿದ್ದಾನೆ. ಇದನ್ನು ನಂಬಿದ ಅಂಗಡಿ ಮಾಲೀಕರಿಂದ ಮೊಬೈಲ್ ಪಡೆದುಕೊಂಡ ಆತ, ಹಣ ಪಾವತಿಸದೆ ಸ್ಥಳದಿಂದ ಪರಾರಿಯಾಗಿದ್ದನು.
ಈ ವಂಚನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕ, ಕೂಜಳ್ಳಿ ನಿವಾಸಿ ಧನಂಜಯ ಮಂಜುನಾಥ ನಾಯ್ಕ (27) ಅವರು ಅಕ್ಟೋಬರ್ 24ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ಭಾಗವಾಗಿ ಪೊಲೀಸರು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಗಮ್ಮನಹಳ್ಳಿ ಗ್ರಾಮದ ಕಿರಣಕುಮಾರ ಪಿ. (30) ಎಂಬ ಆರೋಪಿಯನ್ನು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
ಇನ್ನು ಕೃತ್ಯಕ್ಕೆ ಬಳಸಿದ್ದ ಘೋರ್ಡ್ ಐಕಾನ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರ ಅಂದಾಜು ಮೌಲ್ಯ ₹1 ಲಕ್ಷ ಎಂದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಕುಮಟಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ., ಪಿಎಸ್ಐಗಳಾದ ವಿಠಲ ಮಲವಡಕರ ಹಾಗೂ ಸಾವಿತ್ರಿ ನಾಯಕ ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಹಾಗೂ ಸುಬ್ರಹ್ಮಣ್ಯ ಹೆಗಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ. ಕುಮಟಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.






