ಅಂಗಡಿಗಳು, ನಂದಿನಿ ಬೂತ್‌, ಪಾರ್ಲರ್‌ಗಳೇ ಕಳ್ಳರ ಟಾರ್ಗೆಟ್ – ರಾತ್ರಿ ಗಸ್ತು ಹೆಚ್ಚಿಸಲು ಸ್ಥಳೀಯರ ಆಗ್ರಹ

ಗೌರಿಬಿದನೂರು: ನಗರದ ಪ್ರಶಾಂತ್ ನಗರದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಂಗಡಿಗಳು, ನಂದಿನಿ ಹಾಲಿನ ಬೂತ್‌ಗಳು, ಪಾರ್ಲರ್‌ಗಳು ಹಾಗೂ ಅಮೆಜಾನ್ ಗೋಡಾನ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಕೃತ್ಯ ಎಸಗುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.

ಪದೇಪದೆ ಕಳ್ಳತನ ನಡೆಯುತ್ತಿರುವುದರಿಂದ ವ್ಯಾಪಾರಸ್ಥರು ರಾತ್ರಿ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಲೂ ಭಯಪಡುವಂತಾಗಿದೆ. ಈ ಭಾಗದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಪ್ರದೇಶದ ನಿವಾಸಿ ಪದ್ಮಾವತಿ ಮಾತನಾಡಿ, ತಮ್ಮ ಅಂಗಡಿಯಲ್ಲಿ ಈಗಾಗಲೇ ನಾಲ್ಕು ಬಾರಿ ಕಳ್ಳತನಕ್ಕೆ ಯತ್ನಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಿನಕ್ಕೆ ಕೇವಲ ₹200ರಿಂದ ₹300 ಆದಾಯ ಬರುವ ಸಣ್ಣ ಅಂಗಡಿಗಳನ್ನೂ ಕಳ್ಳರು ಬಿಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೀವನ ನಡೆಸುವುದಾದರೂ ಹೇಗೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಎಂದಿನಂತೆ ಬೆಳಗ್ಗೆ 5.30ಕ್ಕೆ ಅಂಗಡಿಗೆ ಬಂದಾಗ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದ್ದು, ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

ಮತ್ತೊಬ್ಬ ಸ್ಥಳೀಯ ನಿವಾಸಿ ಶಕುಂತಲಮ್ಮ ಮಾತನಾಡಿ, ತಮ್ಮ ಅಂಗಡಿಯಲ್ಲಿದ್ದ ಸುಮಾರು ₹5 ಸಾವಿರ ನಗದು, ಬ್ಯಾಂಕ್ ಖಾತೆಯ ವಿವರಗಳಿದ್ದ ಪಾಸ್‌ಬುಕ್ ಹಾಗೂ ಸಿಗರೇಟ್‌ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಮೆಜಾನ್ ಗೋಡಾನ್, ಅಂಗಡಿಗಳು ಮತ್ತು ನಂದಿನಿ ಬೂತ್‌ಗಳಲ್ಲಿಯೂ ಕಳ್ಳತನ ನಡೆಯುತ್ತಿರುವುದರಿಂದ ವ್ಯಾಪಾರಸ್ಥರು ಆತಂಕದಿಂದ ದಿನ ಕಳೆಯುವಂತಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಮಂಜುನಾಥ್ ಮಾತನಾಡಿ, ಸುಮಾರು 15 ದಿನಗಳ ಹಿಂದೆಯಷ್ಟೇ ಅಮೆಜಾನ್ ಗೋಡಾನ್‌ನಲ್ಲಿ ಕಳ್ಳತನ ನಡೆದಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೀಗ ನಂದಿನಿ ಬೂತ್‌, ಪಾರ್ಲರ್ ಹಾಗೂ ಪ್ರಾವಿಜನ್ ಸ್ಟೋರ್‌ಗಳನ್ನೂ ಕಳ್ಳರು ಗುರಿಯಾಗಿಸಿಕೊಂಡಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಪೊಲೀಸ್ ಬೀಟ್ ಸಿಬ್ಬಂದಿ ಕೇವಲ ಮುಖ್ಯ ರಸ್ತೆಗಳಿಗೆ ಸೀಮಿತವಾಗದೆ ಒಳರಸ್ತೆಗಳು ಹಾಗೂ ಗಲ್ಲಿಗಳಲ್ಲಿಯೂ ನಿಯಮಿತವಾಗಿ ಗಸ್ತು ತಿರುಗಬೇಕು. ರಾತ್ರಿ ವೇಳೆ ಪೊಲೀಸ್ ಕಣ್ಗಾವಲು ಹೆಚ್ಚಿಸಿ, ಕಳ್ಳರನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪೊಲೀಸರಿಂದ ಪರಿಶೀಲನೆ, ರಾತ್ರಿ ಗಸ್ತಿಗೆ ಭರವಸೆ

ಪ್ರಶಾಂತ್ ನಗರದಲ್ಲಿ ಸರಣಿ ಕಳ್ಳತನ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಗೌರಿಬಿದನೂರು ನಗರ ಠಾಣೆಯ ಪಿಎಸ್‌ಐ ವರಲಕ್ಷ್ಮಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿ ಮಾಲೀಕರು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಇಲಾಖೆ, ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಸಾರ್ವಜನಿಕರ ಸಭೆ ನಡೆಸಿ, ರಾತ್ರಿ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದೆ.

ಒಟ್ಟಿನಲ್ಲಿ, ಪ್ರಶಾಂತ್ ನಗರದಲ್ಲಿ ಹೆಚ್ಚುತ್ತಿರುವ ಸರಣಿ ಕಳ್ಳತನಗಳಿಗೆ ಕಡಿವಾಣ ಹಾಕಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವುದು ಪೊಲೀಸ್ ಇಲಾಖೆಯ ಮುಂದಿರುವ ಸವಾಲಾಗಿದೆ. ಪೊಲೀಸ್ ಇಲಾಖೆಯ ಭರವಸೆ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಅವಿನಾಶ್

Related News

error: Content is protected !!