ಸ್ನೇಹಿತನ ಮೇಲಿನ ನಂಬಿಕೆಯಿಂದ ಮನೆಯ ಕೀಲಿ ಕೈಯನ್ನು ಆತನಿಗೆ ನೀಡಿ ಹೋದ ವ್ಯಕ್ತಿಯೊಬ್ಬರಿಗೆ ಭಾರಿ ನಷ್ಟ ಉಂಟಾಗಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಿದ್ದ ಸ್ನೇಹಿತನಿಗೆ ಚಾಕು ತೋರಿಸಿ ಬೆದರಿಸಿದ ಇಬ್ಬರು ಮಂಗಳಮುಖಿಯರು, ಮನೆಯಲ್ಲಿದ್ದ ಬರೋಬ್ಬರಿ 226 ಗ್ರಾಂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಕಳವಾದ ಚಿನ್ನಾಭರಣಗಳ ಮೌಲ್ಯ ಲಕ್ಷಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕ ರೋಹಿತ್ ನೀಡಿದ ದೂರಿನ ಆಧಾರದ ಮೇಲೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 309ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಸ್ನೇಹಿತನಿಗೆ ಮನೆಯ ಕೀಲಿ ಕೊಟ್ಟು ಹೋಗಿದ್ದ ಮಾಲೀಕ!

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಹಿತ್, ನಾಗರಭಾವಿಯ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಅಕ್ಟೋಬರ್ 21ರಂದು ಅವರ ಪತ್ನಿ ತಮಿಳುನಾಡಿಗೆ ತೆರಳಿದ್ದರು. ಮರುದಿನ ರೋಹಿತ್ ತಮ್ಮ ಸ್ವಂತ ಮನೆಗೆ ತೆರಳುವ ಸಂದರ್ಭದಲ್ಲಿ ಒಂದು ದಿನ ಉಳಿದುಕೊಳ್ಳಲು ಬಂದಿದ್ದ ಸ್ನೇಹಿತ ತಿಲಕ್‌ಗೆ ಮನೆಯ ಕೀಲಿ ಕೈಯನ್ನು ನೀಡಿ ಹೋಗಿದ್ದರು.

ಅಂದು ರಾತ್ರಿ ತಿಲಕ್, ‘ಗ್ರೈಂಡರ್’ (Grindr) ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರನ್ನು ರೋಹಿತ್ ಅವರ ಮನೆಗೆ ಆಹ್ವಾನಿಸಿದ್ದಾನೆ. ಆದರೆ, ಈ ಆಹ್ವಾನವೇ ಆತನಿಗೆ ಸಂಕಷ್ಟ ತಂದೊಡ್ಡಿದೆ.

ಮಾಸ್ಕ್ ತೆಗೆದಾಗ ಬಯಲಾಯ್ತು ಅಸಲಿ ಸಂಗತಿ!

ರಾತ್ರಿ ಸುಮಾರು 10.15ರ ವೇಳೆಗೆ ಮಾಸ್ಕ್ ಧರಿಸಿಕೊಂಡು ಮನೆಗೆ ಬಂದ ವ್ಯಕ್ತಿ, ಒಳಗೆ ಬಂದ ಬಳಿಕ ಮಾಸ್ಕ್ ತೆಗೆದಿದ್ದಾನೆ. ಈ ವೇಳೆ ಆತ ಮಂಗಳಮುಖಿ ಎಂಬುದು ತಿಲಕ್‌ಗೆ ತಿಳಿದಿದೆ. ಇಬ್ಬರೂ ಕೆಲಕಾಲ ಮಾತನಾಡಿದ ಬಳಿಕ, ಬಂದಿದ್ದ ವ್ಯಕ್ತಿ ಏಕಾಏಕಿ ಮಲಗುವ ಕೋಣೆಗೆ ತೆರಳಿ ಕಪಾಟುಗಳನ್ನು ಪರಿಶೀಲಿಸಲು ಆರಂಭಿಸಿದ್ದಾನೆ.

ಇದನ್ನು ಗಮನಿಸಿದ ತಿಲಕ್ ಪ್ರಶ್ನಿಸಿದಾಗ, ಸುಮ್ಮನಿರುವಂತೆ ಬೆದರಿಕೆ ಹಾಕಿ ಮತ್ತೊಬ್ಬರಿಗೆ ಕರೆ ಮಾಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಮಂಗಳಮುಖಿ ಕೂಡ ಮನೆಗೆ ಬಂದಿದ್ದಾಳೆ.

ಚಾಕು ತೋರಿಸಿ ಬೆದರಿಕೆ, 226 ಗ್ರಾಂ ಚಿನ್ನ ದೋಚಿ ಪರಾರಿ!

ಮನೆಗೆ ಬಂದ ಇಬ್ಬರೂ ತಿಲಕ್‌ನನ್ನು ಹಾಲ್‌ನಲ್ಲಿ ಕೂರಿಸಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಒಬ್ಬರು ಚಾಕು ಹಿಡಿದು ಆತನ ಮೇಲೆ ನಿಗಾ ಇಟ್ಟಿದ್ದರೆ, ಮತ್ತೊಬ್ಬರು ಮಲಗುವ ಕೋಣೆಯಲ್ಲಿದ್ದ ಕಪಾಟನ್ನು ಒಡೆದು ಅದರಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.

ನಂತರ ತಿಲಕ್‌ನನ್ನು ತಳ್ಳಿ ಇಬ್ಬರೂ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯಿಂದ ಆತಂಕಗೊಂಡ ತಿಲಕ್ ತಡರಾತ್ರಿ ಮನೆ ಮಾಲೀಕ ರೋಹಿತ್‌ಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾನೆ.

ತಕ್ಷಣ ಮನೆಗೆ ಬಂದ ರೋಹಿತ್ ಪರಿಶೀಲಿಸಿದಾಗ, ಕಪಾಟಿನಲ್ಲಿದ್ದ ಮಾಂಗಲ್ಯ ಸರ, ನೆಕ್ಲೇಸ್, ಬಳೆಗಳು, ಮೂರು ಚಿನ್ನದ ಸರಗಳು, ಬ್ರೇಸ್ಲೆಟ್, ಐದು ಉಂಗುರಗಳು ಹಾಗೂ ಮೂರು ಜೊತೆ ಕಿವಿಯೋಲೆಗಳು ಸೇರಿದಂತೆ ಒಟ್ಟು 226 ಗ್ರಾಂ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಗಾಗಿ ಪೊಲೀಸರ ಬಲೆ!

ಘಟನೆಗೆ ಸಂಬಂಧಿಸಿದಂತೆ ರೋಹಿತ್ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಕರೆಗಳ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು ಮನೆಗೆ ಬಂದು ಚಾಕು ತೋರಿಸಿ ದರೋಡೆ ನಡೆಸಿರುವ ಘಟನೆ ಇದೀಗ ಆತಂಕಕ್ಕೆ ಕಾರಣವಾಗಿದೆ.

Related News

error: Content is protected !!