ಗದಗ: ಜಮೀನಿನಲ್ಲಿ ಕಟಾವು ಮಾಡಿದ ಬಳಿಕ ನೆಲದ ಮೇಲೆ ಬಿದ್ದಿದ್ದ ಮೆಕ್ಕೆಜೋಳದ ಕಾಳುಗಳನ್ನು ಸೇವಿಸಿದ 30 ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪದ ಬೆನಾಡಿ ಗ್ರಾಮದ ಮಲ್ಲಪ್ಪ ಪೂಜಾರಿ ಅವರಿಗೆ ಸೇರಿದ 20 ಕುರಿಗಳು ಹಾಗೂ ಚಿಕ್ಕೋಡಿಯ ಬಾಳು ದೋಣಿ ಅವರಿಗೆ ಸೇರಿದ 10 ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಕುರಿ ಸಾಕಾಣಿಕೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕುರಿಗಾಹಿಗಳಿಗೆ ಭಾರೀ ನಷ್ಟ ಉಂಟಾಗಿದೆ.

ಘಟನೆ ಕುರಿತು ಮಾಹಿತಿ ನೀಡಿದ ಸ್ಥಳೀಯ ಪಶುವೈದ್ಯಾಧಿಕಾರಿ ಡಾ. ನಿಂಗಪ್ಪ ಓಲೆಕಾರ್, ಮೆಕ್ಕೆಜೋಳದ ಒಕ್ಕಣೆ ಸಂದರ್ಭದಲ್ಲಿ ಸುಮಾರು ಶೇ.30ರಷ್ಟು ಕಾಳುಗಳು ನೆಲದ ಮೇಲೆ ಬೀಳುತ್ತವೆ. ಕುರಿಗಳು ಈ ಕಾಳುಗಳನ್ನು ಅತಿಯಾಗಿ ಸೇವಿಸಿದಾಗ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಿ, ಹೊಟ್ಟೆ ಉಬ್ಬುವ ಸಮಸ್ಯೆಯಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಕಣ್ಣೆದುರೇ ತಮ್ಮ ಕುರಿಗಳು ಸಾವನ್ನಪ್ಪಿದ್ದನ್ನು ಕಂಡ ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದಾರೆ. ಕುರಿಗಳ ಸಾವಿನಿಂದ ಜೀವನೋಪಾಯಕ್ಕೆ ಆಧಾರವಾಗಿದ್ದ ಸಂಪತ್ತನ್ನು ಕಳೆದುಕೊಂಡು ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವರದಿ: ಶಿವು ಪಿ.ಆರ್.

error: Content is protected !!