
ತುಮಕೂರು: ಪಟಾಕಿ ಮಾರಾಟ ಹಾಗೂ ದಾಸ್ತಾನು ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು, ಉಳಿಕೆ ಹಣ ಸ್ವೀಕರಿಸುತ್ತಿದ್ದ ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಗ್ರೇಡ್-1 ಕಚೇರಿ ಸಹಾಯಕ ಮುರಳೀಧರ್ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ತಾಲೂಕಿನ ಹೆಗ್ಗೆರೆ ನಿವಾಸಿ ಉಮಾಶಂಕರ್ ಎಸ್.ಸಿ. ಅವರು ತುಮಕೂರು ನಗರದಲ್ಲಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಹಾಗೂ ಪಟಾಕಿ ದಾಸ್ತಾನು ಮಾಡಲು ಪರವಾನಗಿ ಕೋರಿ ಸೆಪ್ಟೆಂಬರ್ 25ರಂದು ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತು ವಿಚಾರಿಸಲು ಅಕ್ಟೋಬರ್ 6ರಂದು ಕಚೇರಿಗೆ ಭೇಟಿ ನೀಡಿದಾಗ, ವಿವಿಧ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸುವ ನೆಪದಲ್ಲಿ ಆರೋಪಿ ಮುರಳೀಧರ್ 2,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಈಗಾಗಲೇ 1,000 ರೂ. ಮುಂಗಡವಾಗಿ ಪಡೆದು, ಉಳಿದ 1,000 ರೂ. ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಸರ್ಕಾರಿ ಕೆಲಸಕ್ಕಾಗಿ ಲಂಚ ನೀಡಲು ಇಷ್ಟಪಡದ ಉಮಾಶಂಕರ್ ಅವರು ಅಕ್ಟೋಬರ್ 7ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಳಿಕೆ 1,000 ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಮುರಳೀಧರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕಿ ನಿರ್ಮಲಾ.ವಿ. ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತು. ಡಿವೈಎಸ್ಪಿಗಳಾದ ಡಾ. ಸಂತೋಷ್.ಕೆ.ಎಂ. ಮತ್ತು ಮಂಜುನಾಥ.ಎಂ., ಇನ್ಸ್‌ಪೆಕ್ಟರ್‌ಗಳಾದ ರಾಘವೇಂದ್ರ.ಜಿ.ಕೆ. ಮತ್ತು ರಾಜು.ಟಿ. ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ, ಅಂತಹವರ ವಿರುದ್ಧ ಕೂಡಲೇ ಸ್ಥಳೀಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಕೆಲಸಗಳಿಗೆ ಲಂಚದ ಬೇಡಿಕೆ ಕೇಳಿಬಂದಿರುವುದು ಜಿಲ್ಲಾಧಿಕಾರಿ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಣದ ಅಗತ್ಯದ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.






