
ಪಾವಗಡ: ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದು, ಅವರಿಂದ 21 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಹಾಗೂ ಸತ್ಯಸಾಯಿ ಜಿಲ್ಲೆಗಳಿಗೆ ಸೇರಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆಂಧ್ರ ಸಾಯಿಕುಮಾರ್ (ಅನಂತಪುರ ನಗರ), ಕನುಮುಕ್ಕಲ ಚಾಂದ್ ಬಾಷಾ (ಅಕ್ಕಂಪಲ್ಲಿ ಗ್ರಾಮ, ಅನಂತಪುರ ಜಿಲ್ಲೆ) ಹಾಗೂ ಗುಂಡಪ್ಪಗಾರಿ (ಸೂದಂ ಕೊಡಿಗೇನಹಳ್ಳಿ ಗ್ರಾಮ, ಸತ್ಯಸಾಯಿ ಜಿಲ್ಲೆ) ಎಂದು ಗುರುತಿಸಲಾಗಿದೆ.
ತುಮಕೂರು ಜಿಲ್ಲೆಯ ದೇವಸ್ಥಾನಗಳೂ ಟಾರ್ಗೆಟ್
ಆರೋಪಿಗಳು ತುಮಕೂರು ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶದ ವಿವಿಧ ಪ್ರದೇಶಗಳಲ್ಲಿರುವ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಪ್ರಸಿದ್ಧ ವೀರ ನಾಗಮ್ಮ ದೇವಸ್ಥಾನ ಹಾಗೂ ತುಮಕೂರು ನಗರದ ಕ್ಯಾತಸಂದ್ರದಲ್ಲಿರುವ ದೇವಸ್ಥಾನ ಸೇರಿದಂತೆ ಆಂಧ್ರಪ್ರದೇಶದ ವಿವಿಧೆಡೆ ಒಟ್ಟು 9 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ ಆರೋಪ ಇವರ ಮೇಲಿದೆ.
ಆಂಧ್ರಪ್ರದೇಶದ ಕಂಬದೂರು, ಬ್ರಹ್ಮಸಮುದ್ರ, ಶೆಟ್ಟೂರು, ಪಾಮಿಡಿ, ಬುಕ್ಕರಾಯಸಮುದ್ರ, ರಾಮಗಿರಿ ಹಾಗೂ ನಸನಕೋಟ ಮುತ್ಯಾಲಮ್ಮ ದೇವಸ್ಥಾನಗಳಲ್ಲಿಯೂ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಲಾಗಿದೆ.
21 ಕೆಜಿ ಬೆಳ್ಳಿ ಆಭರಣ ವಶ
ಅಂತಾರಾಜ್ಯ ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಗದೀಶ್ ಅವರ ಮಾರ್ಗದರ್ಶನದಲ್ಲಿ ಕಲ್ಯಾಣದುರ್ಗ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 21 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ದೇವಸ್ಥಾನ ಕಳ್ಳತನ ಪ್ರಕರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಆರೋಪಿಗಳ ಕೃತ್ಯಗಳು ಹಾಗೂ ಇತರ ಪ್ರಕರಣಗಳಲ್ಲಿನ ಅವರ ಪಾತ್ರದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.






