ಗೌರಿಬಿದನೂರು: ನಗರದ ಕರೇಕಲ್ಲಹಳ್ಳಿ ಪ್ರದೇಶದಲ್ಲಿ ಮನೆವೊಂದನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ನಗರ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ನಡೆದಿದೆ.

ಕರೇಕಲ್ಲಹಳ್ಳಿ ಪ್ರದೇಶದ ಮನೆಯೊಂದನ್ನು ಎಳನೀರು ವ್ಯಾಪಾರ ನಡೆಸುವುದಾಗಿ ಹೇಳಿ ಆರೋಪಿಗಳು ಬಾಡಿಗೆಗೆ ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಆ ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಖಚಿತ ಮಾಹಿತಿ ಪಡೆದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ, ಅಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಕೊಡಿಗೇನಹಳ್ಳಿಯ ಶಶಿಕುಮಾರ್ (23), ಆಂಧ್ರಪ್ರದೇಶದ ಅಮರಾಪುರದ ಕವಿತಾ ಬಾಯಿ (31), ಗುಂಡಾಪುರದ ಆಯುಷ್ಯ (25) ಹಾಗೂ ಮಂಚೇನಹಳ್ಳಿಯ ರೇಷ್ಮಾ (41) ಎಂದು ಗುರುತಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ ಎಂಬ ಮಹಿಳೆ ಪರಾರಿಯಾಗಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಕ್ರಮ ಚಟುವಟಿಕೆಯ ಹಿನ್ನೆಲೆ, ಮನೆ ಬಾಡಿಗೆಗೆ ಪಡೆಯಲು ಬಳಸಿದ ಮಾಹಿತಿ ಹಾಗೂ ಈ ಪ್ರಕರಣದಲ್ಲಿ ಇನ್ನಿತರರು ಭಾಗಿಯಾಗಿರುವ ಸಾಧ್ಯತೆ ಕುರಿತು ತನಿಖೆ ಮುಂದುವರಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಮನೆಗಳನ್ನು ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಮನೆ ಮಾಲೀಕರು ಬಾಡಿಗೆದಾರರ ಗುರುತಿನ ಚೀಟಿ, ವಿಳಾಸ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ದಾಳಿಯಲ್ಲಿ ವೃತ್ತ ನಿರೀಕ್ಷಕ ಅಂಜನ್ ಕುಮಾರ್, ನಗರ ಠಾಣೆಯ ಪಿಎಸ್‌ಐ ವರಲಕ್ಷ್ಮಿ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ವರದಿ: ಅವಿನಾಶ್

Related News

error: Content is protected !!