ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಶಾಲಾ ಮುಖ್ಯಶಿಕ್ಷಕನಿಗೆ ಗ್ರಾಮಸ್ಥರೇ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.

ಬೇಲೂರು ತಾಲೂಕಿನ ಖಾಸಗಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ನರೇಂದ್ರ ಎಂಬಾತನ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಪದೇ ಪದೇ ತನ್ನ ಕಚೇರಿಗೆ ಕರೆದು ಕಸ ಗುಡಿಸುವಂತೆ ಹೇಳುತ್ತಿದ್ದನು. ಕಸ ಗುಡಿಸಲು ಬಂದಾಗ ವಿದ್ಯಾರ್ಥಿನಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಮುಖ್ಯಶಿಕ್ಷಕನಿಂದ ಇತ್ತೀಚೆಗೆ ವಿದ್ಯಾರ್ಥಿನಿಗೆ ಬಲವಂತದಿಂದ ಚುಂಬಿಸಲು ಯತ್ನಿಸಿದ್ದು, ಇದರಿಂದ ಹೆದರಿದ ವಿದ್ಯಾರ್ಥಿನಿ ತನ್ನ ತಾಯಿಗೆ ಹಾಗೂ ದೊಡ್ಡಪ್ಪನ ಮಗನಿಗೆ ವಿಷಯವನ್ನು ತಿಳಿಸಿದ್ದಳು. ನಂತರ ಪೋಷಕರು ಪೊಲೀಸರ ಬಳಿ ತೆರಳಿ ಮಾಹಿತಿ ತಿಳಿಸಿದ್ದು, ಪೊಲೀಸರು ವಿಚಾರಣೆಗಾಗಿ ಬರ ಹೇಳಿದಾಗ ಶಿಕ್ಷಕ ಒಪ್ಪದ ಕಾರಣ, ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿದ್ಯಾರ್ಥಿನಿ ಹಾಗೂ ಆಕೆಯ ಸಂಬಂಧಿಕರು ಪೊಲೀಸ್‌ ಠಾಣೆಗೆ ಬಾರದ ಹಿನ್ನಲೆ ಬೇಲೂರು ವೃತ್ತ ನಿರೀಕ್ಷಕ ರವಿಕಿರಣ್, ಪಿಎಸ್‍ಐ ಎಸ್.ಜಿ.ಪಾಟೀಲ್ ತಾವೇ ವಿದ್ಯಾರ್ಥಿನಿಯ ಮನೆಗೆ ತೆರಳಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿ ಆರೋಪಿ ಶಿಕ್ಷಕನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇನ್ನು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿದ್ಯಾ ಸಂಸ್ಥೆಯು ಕೂಡ ಮುಖ್ಯಶಿಕ್ಷಕ ನರೇಂದ್ರನನ್ನು ಅಮಾನತು ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

error: Content is protected !!