
ಬೆಂಗಳೂರು: ವೈದ್ಯಕೀಯ ಪ್ರವೇಶ ಪರೀಕ್ಷೆ (NEET)ಗೆ ತಯಾರಿ ನಡೆಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದ ರೀಲ್ಸ್ ಗೀಳಿಗೆ ಬಿದ್ದು, ತಮ್ಮ ಶಿಕ್ಷಣ ಹಾಗೂ ಭವಿಷ್ಯಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ ಎನ್ನಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
NEET ಪರೀಕ್ಷೆಯ ಸಿದ್ಧತೆಗಾಗಿ ಬೆಂಗಳೂರಿನ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರು ಓದಿನ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವತ್ತ ಹೆಚ್ಚು ಆಸಕ್ತಿ ತೋರಿದ್ದರು ಎನ್ನಲಾಗಿದೆ. ಈ ವೇಳೆ ಹಾಸ್ಟೆಲ್ ಕೊಠಡಿಯಲ್ಲಿ ಆಕ್ಷೇಪಾರ್ಹ ಹಾಗೂ ಅತಿರೇಕದ ರೀತಿಯಲ್ಲಿ ವಿಡಿಯೋವೊಂದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ವಿಡಿಯೋ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೇವಲ ಎರಡು ದಿನಗಳಲ್ಲೇ ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡಿದ್ದು, ಬರೋಬ್ಬರಿ 90 ಮಿಲಿಯನ್ಗೂ ಅಧಿಕ ಅಂದರೆ 9 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು ಎನ್ನಲಾಗಿದೆ.
ಸಹೋದರನ ಕಣ್ಣಿಗೆ ಬಿದ್ದ ವಿಡಿಯೋ
ವಿಡಿಯೋ ವಿದ್ಯಾರ್ಥಿನಿಯೊಬ್ಬಳ ಸಹೋದರನ ಗಮನಕ್ಕೆ ಬಂದಿದ್ದು, ಆತ ತಕ್ಷಣವೇ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾನೆ. ವಿಷಯ ತಿಳಿದು ಆಘಾತಕ್ಕೊಳಗಾದ ಪೋಷಕರು ಬೆಂಗಳೂರಿಗೆ ಧಾವಿಸಿ, ಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ವಿದ್ಯಾರ್ಥಿನಿಯರು, ಕೇವಲ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ವಿಡಿಯೋ ಮಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಮಗಳ ನಡವಳಿಕೆಯಿಂದ ತೀವ್ರವಾಗಿ ಮನನೊಂದ ಪೋಷಕರು, ಆಕೆಯ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸದಿರಲು ನಿರ್ಧರಿಸಿ, ಬೆಂಗಳೂರಿನಿಂದ ಊರಿಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಕ್ಷಣಿಕ ಜನಪ್ರಿಯತೆ, ಲೈಕ್ಸ್ ಮತ್ತು ಫಾಲೋವರ್ಸ್ಗಾಗಿ ಯುವಜನರು ಕೈಗೊಳ್ಳುವ ಕೆಲವು ನಿರ್ಧಾರಗಳು ಮುಂದೆ ಅವರ ಶಿಕ್ಷಣ, ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಬಹುದು ಎಂಬ ಚರ್ಚೆ ಇದೀಗ ಈ ಘಟನೆಯ ಬೆನ್ನಲ್ಲೇ ಮುನ್ನೆಲೆಗೆ ಬಂದಿದೆ.
ಸಾಮಾಜಿಕ ಜಾಲತಾಣ ಬಳಸುವಾಗ ಯುವಜನರು ಅದರ ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು ಎಂಬ ಸಂದೇಶವೂ ಈ ಘಟನೆ ಮೂಲಕ ಮತ್ತೊಮ್ಮೆ ಚರ್ಚೆಗೆ ಬಂದಿದೆ.






