ಯಲ್ಲಾಪುರ: 2001ರಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಗುಜರಾತ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

ಗುಜರಾತ್‌ನ ಪೋರಬಂದರ್ ಜಿಲ್ಲೆಯ ರಣವಾವ್ ತಾಲ್ಲೂಕಿನ ನಿವಾಸಿ ಕೇಸುಬಾಯಿ ಮಿನಂದಾಬಾಯಿ ಸಿಸೋಡಿಯಾ (58) ಬಂಧಿತ ಆರೋಪಿ. ಆತನನ್ನು ಆಗಸ್ಟ್ 25, 2026ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

2001ರಲ್ಲಿ ಪ್ರಕರಣ ದಾಖಲು

2001ರ ಮೇ 23ರಂದು ಕಾರವಾರ–ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ-63ರ ಜೋಗಿಕೊಪ್ಪ ರಸ್ತೆ ಕತ್ರಿ ಬಳಿ ಲಾರಿ ಚಾಲನೆ ಮಾಡಿಕೊಂಡು ಬಂದಿದ್ದ ಕೇಸುಬಾಯಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಂದಿಗೆ ಜಗಳ ಮಾಡಿಕೊಂಡಿದ್ದ ಆರೋಪ ಎದುರಿಸುತ್ತಿದ್ದ.

ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

2001ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ ಹಲವು ಬಾರಿ ವಿಳಾಸಕ್ಕೆ ವಾರೆಂಟ್ ಜಾರಿಗೊಳಿಸಿದರೂ ಆತ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಬಳಿಕ ನ್ಯಾಯಾಲಯದಿಂದ ಉದ್ಘೋಷಣೆಯೂ ಹೊರಡಿಸಲಾಗಿತ್ತು.

ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘಕಾಲ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು 2010ರ ಏಪ್ರಿಲ್ 12ರಂದು ಎಲ್‌ಪಿಸಿ (ಲಾಂಗ್ ಪೆಂಡಿಂಗ್ ಕೇಸ್) ಎಂದು ದಾಖಲಿಸಲಾಗಿತ್ತು.

ಗುಜರಾತ್‌ನಲ್ಲಿ ಕೊನೆಗೂ ಪತ್ತೆ

ಪ್ರಕರಣವನ್ನು ಬಾಕಿ ಉಳಿಸದೆ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿಸಿದ್ದ ಪೊಲೀಸರು, ಆತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡರು. ಬಳಿಕ ಪಿಎಸ್‌ಐ ಸಿದ್ದಪ್ಪ ಗುಡಿ ನೇತೃತ್ವದ ತಂಡ ಗುಜರಾತ್‌ಗೆ ತೆರಳಿ ರಣವಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿತು.

ಗುಜರಾತ್‌ಗೆ ತೆರಳಿದ್ದ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ ಮತ್ತು ಮಾರುತಿ ಅವರ ಸತತ ಪ್ರಯತ್ನವೂ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿತು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ ಹಾಗೂ ಪಿಐ ರಮೇಶ ಹನಾಪುರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಮಹಾವೀರ ಕಾಂಬಳೆ ಅವರ ನೇತೃತ್ವದಲ್ಲಿ ಪತ್ತೆ ಕಾರ್ಯ ನಡೆದಿದ್ದು, ಸಂತೋಷ ಬಾಳೇರ, ಬಸವರಾಜ ಡಿ.ಕೆ., ಪರಮೇಶ್ವರ ಎಸ್.ಕೆ. ಹಾಗೂ ರೇಖಾ ಎಂ.ಎಸ್. ಅವರು ಸಹಕರಿಸಿದ್ದಾರೆ.

ಅಂಕೋಲಾ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಮಹಮದ್ ಶಫೀ ಶೇಖ್ ಹಾಗೂ ಕಾರವಾರದ ಟೆಕ್ನಿಕಲ್ ಶೆಲ್ ವಿಭಾಗದ ಉದಯ ಗುನಗ, ಬಬನ್ ಡಿ. ಕದಂ ಮತ್ತು ಮಹಾಲಿಂಗ ಸಾವಳಗಿ ಕೂಡ ಆರೋಪಿಯ ಪತ್ತೆಗೆ ನೆರವಾಗಿದ್ದಾರೆ.

25 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Related News

error: Content is protected !!