
ಮೀರತ್: ರಕ್ಷಣೆ ನೀಡಬೇಕಾದ ಪೊಲೀಸನೇ ಯುವತಿಯೊಬ್ಬಳಿಗೆ ವಂಚನೆ ಎಸಗಿದ ಆರೋಪ ಉತ್ತರ ಪ್ರದೇಶದ ಮೀರತ್ನಲ್ಲಿ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಆಕೆಯ ಬ್ಯಾಂಕ್ ಖಾತೆಗೆ ಕೇವಲ ₹10,000 ವರ್ಗಾಯಿಸಿ ಸಂಪರ್ಕ ಕಡಿತಗೊಳಿಸಿದ ಆರೋಪ ಸಬ್ ಇನ್ಸ್ಪೆಕ್ಟರ್ ಒಬ್ಬರ ವಿರುದ್ಧ ಕೇಳಿಬಂದಿದೆ.
ದೆಹಲಿ ಮೂಲದ 29 ವರ್ಷದ ಯುವತಿ 2025ರ ಸೆಪ್ಟೆಂಬರ್ನಲ್ಲಿ ಪದವಿ ಪ್ರಮಾಣಪತ್ರ ಪಡೆಯಲು ಮೀರತ್ನ ಸಿಸಿಎಸ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಈ ವೇಳೆ ಕೆಲಸ ಆಗದೆ ಕಂಗಾಲಾಗಿದ್ದ ಯುವತಿಯನ್ನು ಗಮನಿಸಿದ ಎಸ್ಐ ಲಲಿತ್ ಮೋಹನ್, ಸಹಾಯ ಮಾಡುವುದಾಗಿ ಹೇಳಿ ತನ್ನ ಮೊಬೈಲ್ ನಂಬರ್ ನೀಡಿದ್ದಾನೆ ಎನ್ನಲಾಗಿದೆ. ಬಳಿಕ ಇಬ್ಬರ ನಡುವೆ ನಿರಂತರ ಸಂಪರ್ಕ ಬೆಳೆದಿದ್ದು, ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಯುವತಿ ಯುಪಿಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ, ತನ್ನ ಬಳಿ ಉತ್ತಮ ಸ್ಟಡಿ ನೋಟ್ಸ್ಗಳಿವೆ ಎಂದು ಹೇಳಿ ಆಕೆಯನ್ನು ಮೀರತ್ಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ನೋಟ್ಸ್ ಪಡೆಯಲು ಬಂದ ಯುವತಿಯನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ನಂತರ ದೆಹಲಿಗೆ ಮರಳಿದ ಯುವತಿ ಮದುವೆಯ ಬಗ್ಗೆ ಪ್ರಶ್ನಿಸಿದಾಗ, ಎಸ್ಐ ಮದುವೆಯಾಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದಾಗ, ಪೊಲೀಸ್ ಅಧಿಕಾರಿಯಾಗಿರುವ ತನ್ನ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ವೇಳೆ, ಆಕೆಯ ಬ್ಯಾಂಕ್ ಖಾತೆಗೆ ₹10,000 ವರ್ಗಾಯಿಸಿ ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಲಾಗಿದೆ ಎಂದು ಆರೋಪಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಎಸ್ಐ ಲಲಿತ್ ಮೋಹನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಸದ್ಯ ಆರೋಪಿ ಎಸ್ಐ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.






