ಬೆಂಗಳೂರು: ಪ್ರೀತಿಯ ಹೆಸರಿನಲ್ಲಿ ಯುವತಿಗೆ ನಿರಂತರ ಕಿರುಕುಳ ನೀಡಿ, ಖಾಸಗಿ ಫೋಟೋ-ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದ್ದು, ಈ ಕಿರುಕುಳದಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಬಳಿಯ ಅಗರ ಕೆರೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದ ವಾಣಿ ಎಂದು ಗುರುತಿಸಲಾಗಿದೆ. ಕಾಲೇಜು ದಿನಗಳಲ್ಲಿ ಅಭಿಷೇಕ್ ಎಂಬಾತನ ಪರಿಚಯವಾಗಿ, ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ.

ಕಾಲೇಜು ಶಿಕ್ಷಣ ಪೂರ್ಣಗೊಂಡ ಬಳಿಕ ವಾಣಿ ಬೆಂಗಳೂರಿಗೆ ಬಂದು ಹೆಚ್‌ಎಸ್‌ಆರ್ ಲೇಔಟ್‌ನ ಖಾಸಗಿ ಚಿನ್ನದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಅಭಿಷೇಕ್ ಆಕೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ವಾಣಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡಿದ್ದ ಅಭಿಷೇಕ್, ತಾನು ಹೇಳಿದಂತೆ ನಡೆದುಕೊಳ್ಳಬೇಕು, ಇಲ್ಲವಾದರೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದ ವಾಣಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತಿದ್ದ ವಾಣಿ, ಡೆತ್‌ನೋಟ್ ಬರೆದಿಟ್ಟು ಅಗರ ಕೆರೆಗೆ ತೆರಳಿದ್ದರು ಎನ್ನಲಾಗಿದೆ. ಬಳಿಕ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಭಿಷೇಕ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಖಾಸಗಿ ಫೋಟೋ-ವಿಡಿಯೋಗಳನ್ನು ಬಳಸಿಕೊಂಡು ಬೆದರಿಕೆ ಹಾಕಲಾಗಿತ್ತೇ, ಆತ್ಮಹತ್ಯೆಗೆ ಕಿರುಕುಳವೇ ಕಾರಣವೇ ಎಂಬುದರ ಬಗ್ಗೆ ತನಿಖೆಯ ಬಳಿಕ ಸಂಪೂರ್ಣ ಮಾಹಿತಿ ಹೊರಬರಬೇಕಿದೆ.

Related News

error: Content is protected !!