
ಸೀತಾಪುರ: ಪೊಲೀಸ್ ಠಾಣೆಗಳಿಗೆ ಪ್ರತಿದಿನ ಹಲವು ರೀತಿಯ ದೂರುಗಳು ಬರುತ್ತವೆ. ಆದರೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹಮೂದಾಬಾದ್ ಕೊತ್ವಾಲಿ ಠಾಣೆಯಲ್ಲಿ ಬಂದಿದ್ದ ಮನವಿಯೊಂದು ಪೊಲೀಸರನ್ನೇ ಅಚ್ಚರಿಗೊಳಿಸಿದೆ. ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಪ್ರೇಮಿ ಇಬ್ಬರ ಜತೆಗೂ ಒಟ್ಟಿಗೆ ಸಂಸಾರ ನಡೆಸಲು ಅವಕಾಶ ಕಲ್ಪಿಸುವಂತೆ ಪೊಲೀಸರ ಮೊರೆ ಹೋಗಿದ್ದಾಳೆ ಎನ್ನಲಾಗಿದೆ.
ಮಹಮೂದಾಬಾದ್ ಕೊತ್ವಾಲಿ ಠಾಣೆಗೆ ಮಹಿಳೆ, ಆಕೆಯ ಪತಿ ಹಾಗೂ ಪ್ರೇಮಿ ಮೂವರೂ ಒಟ್ಟಿಗೆ ತೆರಳಿ ಲಿಖಿತ ಮನವಿ ಸಲ್ಲಿಸಿದ್ದಾರೆ. ತಮ್ಮ ಮೂವರಿಗೂ ಒಪ್ಪಿಗೆ ಇದ್ದು, ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸಲು ಬಯಸಿರುವುದಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ಮಹಿಳೆಯ ಪತಿಯ ತಂದೆ ಹಾಗೂ ಇಬ್ಬರು ಸಹೋದರಿಯರು ಈ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ತಮ್ಮ ಇಚ್ಛೆಯಂತೆ ಒಟ್ಟಿಗೆ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ಅಚ್ಚರಿಯ ಸಂಗತಿಯೆಂದರೆ, ಮೂವರು ಒಟ್ಟಿಗೆ ವಾಸಿಸುವ ‘ಪ್ಲ್ಯಾನ್’ ಬಗ್ಗೆಯೂ ಮಹಿಳೆ ಪೊಲೀಸರಿಗೆ ವಿವರಿಸಿದ್ದಾಳೆ ಎನ್ನಲಾಗಿದೆ. ಪತಿ ಹಗಲಿನಲ್ಲಿ ಕೆಲಸಕ್ಕೆ ತೆರಳುವ ವೇಳೆ ಪ್ರೇಮಿ ತನ್ನೊಂದಿಗೆ ಇರುತ್ತಾನೆ. ರಾತ್ರಿ ಪ್ರೇಮಿ ಕೆಲಸಕ್ಕೆ ತೆರಳಿದ ಬಳಿಕ ಪತಿ ಮನೆಗೆ ಬಂದು ತನ್ನೊಂದಿಗೆ ಇರುತ್ತಾರೆ ಎಂಬ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.
ಮಹಿಳೆಯ ಈ ‘ಶಿಫ್ಟ್ ಆಧಾರಿತ ಸಂಸಾರ’ದ ಮನವಿ ಕೇಳಿ ಪೊಲೀಸ್ ಅಧಿಕಾರಿಗಳೇ ಅಚ್ಚರಿಗೊಳಗಾಗಿದ್ದಾರೆ. ಹಲವು ವರ್ಷಗಳ ಪೊಲೀಸ್ ಸೇವೆಯಲ್ಲಿ ಇಂತಹ ವಿಚಿತ್ರ ಮನವಿಯನ್ನು ನೋಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಸದ್ಯ ಪತಿ, ಪತ್ನಿ ಹಾಗೂ ಪ್ರೇಮಿಯ ಈ ವಿಚಿತ್ರ ಮನವಿ ಸ್ಥಳೀಯವಾಗಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದಲ್ಲಿ ಕಾನೂನುಬದ್ಧವಾಗಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.






