ತಿರುಪತಿ: ಬೆಳಗ್ಗೆ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದಾಗ, ಸ್ಥಳೀಯರು ಹಾಗೂ ಪೊಲೀಸರು ಇದೊಂದು ಭೀಕರ ರಸ್ತೆ ಅಪಘಾತ ಎಂದು ಆರಂಭದಲ್ಲಿ ಭಾವಿಸಿದ್ದರು. ಆದರೆ ಪ್ರಕರಣದ ತನಿಖೆ ಆಳಕ್ಕಿಳಿದಂತೆ, ಇದು ಅಪಘಾತವಲ್ಲ, ಪೂರ್ವಯೋಜಿತ ಕೊಲೆ ಎಂಬ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. ಪತಿಯ ಕೊಲೆಗೆ ಪತ್ನಿಯೇ ಸಂಚು ರೂಪಿಸಿದ್ದಳು ಎಂಬ ಆರೋಪ ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.

ಆಂಧ್ರಪ್ರದೇಶದ ಪೀಲೇರು-ತಿರುಪತಿ ಹೆದ್ದಾರಿ ಸಮೀಪ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿತ್ತು. ತಲೆಗೆ ಗಂಭೀರ ಗಾಯಗಳಾಗಿದ್ದು, ದೇಹದ ಮೇಲೆ ರಕ್ತದ ಕಲೆಗಳಿದ್ದ ಹಿನ್ನೆಲೆಯಲ್ಲಿ ಯಾವುದೋ ವಾಹನ ಢಿಕ್ಕಿ ಹೊಡೆದು ಆತ ಮೃತಪಟ್ಟಿರಬಹುದು ಎಂದು ಪೊಲೀಸರು ಕೂಡ ಆರಂಭದಲ್ಲಿ ಶಂಕಿಸಿದ್ದರು.

ಆದರೆ ಮೃತನ ಕುಟುಂಬಸ್ಥರ ಅನುಮಾನ ಹಾಗೂ ಪೊಲೀಸರ ಸೂಕ್ಷ್ಮ ತನಿಖೆಯಿಂದ ಅಸಲಿ ಸಂಗತಿ ಹೊರಬಂದಿದೆ.

20 ವರ್ಷಗಳ ಹಿಂದೆ ಪೀಲೇರಿಗೆ ಬಂದಿದ್ದ ದಂಪತಿ

ಮೃತನನ್ನು ಪೀಲೇರಿಯ ಡಿಸ್ ಕಾಲೋನಿ ನಿವಾಸಿ ಸುಬ್ರಹ್ಮಣ್ಯಂ (47) ಎಂದು ಗುರುತಿಸಲಾಗಿದೆ. ಸುಮಾರು 20 ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಪೀಲೇರಿಗೆ ಬಂದಿದ್ದ ಸುಬ್ರಹ್ಮಣ್ಯಂ ಮತ್ತು ಅವರ ಪತ್ನಿ ಉಮಾದೇವಿ ಅಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿದ್ದರು. ದಂಪತಿಗೆ ಲೋಹಿತ್ ಎಂಬ ಪುತ್ರನಿದ್ದಾನೆ.

ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿಯ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು ಎನ್ನಲಾಗಿದೆ. ಪತ್ನಿ ಉಮಾದೇವಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಹೊಂದಿದ್ದ ಎನ್ನಲಾದ ಅಕ್ರಮ ಸಂಬಂಧವೇ ಈ ಕಲಹಕ್ಕೆ ಕಾರಣವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಸಂಬಂಧಕ್ಕೆ ಪತಿ ಸುಬ್ರಹ್ಮಣ್ಯಂ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ್ದ ಉಮಾದೇವಿ, ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಮನೆಯಲ್ಲೇ ಕೊಲೆ… ಬಳಿಕ ಹೆದ್ದಾರಿಯಲ್ಲಿ ಶವ!

ಪೊಲೀಸರ ಪ್ರಕಾರ, ಸುಬ್ರಹ್ಮಣ್ಯಂ ಅವರನ್ನು ಮನೆಯಲ್ಲೇ ಕೊಲೆ ಮಾಡಲಾಗಿದೆ. ಬಳಿಕ ಪ್ರಕರಣವನ್ನು ರಸ್ತೆ ಅಪಘಾತದಂತೆ ಬಿಂಬಿಸುವ ಉದ್ದೇಶದಿಂದ ಮೃತದೇಹವನ್ನು ರಾತ್ರೋರಾತ್ರಿ ಮನೆಯಿಂದ ಹೊರತೆಗೆದು ಹೆದ್ದಾರಿ ಬದಿಯಲ್ಲಿ ಹಾಕಲಾಗಿದೆ.

ಅಲ್ಲದೆ, ತಲೆಗೆ ಗಾಯವಾಗುವಂತೆ ಮಾಡಿ ಯಾವುದೋ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂಬಂತೆ ಪ್ರಕರಣವನ್ನು ಸೃಷ್ಟಿಸಲು ಪ್ರಯತ್ನಿಸಲಾಗಿದೆ ಎನ್ನಲಾಗಿದೆ.

ಕೊಲೆಯ ಬಳಿಕ ಉಮಾದೇವಿ ಹಾಗೂ ಪುತ್ರ ಲೋಹಿತ್ ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ತೆರಳಿದ್ದರು.

ತಂದೆಯ ಅನುಮಾನವೇ ಪ್ರಕರಣಕ್ಕೆ ತಿರುವು

ಬೆಳಗ್ಗೆ ಸುಬ್ರಹ್ಮಣ್ಯಂ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ವಿಚಾರ ತಿಳಿದ ಅವರ ತಂದೆ ಕೃಷ್ಣಯ್ಯ ಅವರಿಗೆ ಅನುಮಾನ ಮೂಡಿತ್ತು. ಮಗ, ಸೊಸೆ ಹಾಗೂ ಮೊಮ್ಮಗನಿಗೆ ಕರೆ ಮಾಡಿದರೂ ಯಾರೂ ಫೋನ್ ಸ್ವೀಕರಿಸಿರಲಿಲ್ಲ.

ಇದರಿಂದ ಮತ್ತಷ್ಟು ಅನುಮಾನಗೊಂಡ ಕೃಷ್ಣಯ್ಯ, ಪೀಲೇರಿಯಲ್ಲಿದ್ದ ಮಗನ ಮನೆಗೆ ತೆರಳಿದ್ದಾರೆ. ಆದರೆ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯಿಂದ ಹೆದ್ದಾರಿವರೆಗೆ ರಕ್ತದ ಕಲೆ!

ಕೃಷ್ಣಯ್ಯ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಹೊಸ್ತಿಲಿನಿಂದ ಹೆದ್ದಾರಿ ಕಡೆಗೆ ರಕ್ತದ ಕಲೆಗಳು ಕಂಡುಬಂದಿದ್ದು, ಪೊಲೀಸರ ಅನುಮಾನ ಮತ್ತಷ್ಟು ಬಲಗೊಂಡಿದೆ.

ನಂತರ ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ಪೊಲೀಸರು ಪ್ರಕರಣವನ್ನು ಅಪಘಾತದ ಬದಲು ಕೊಲೆ ಪ್ರಕರಣವೆಂದು ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ.

ತನಿಖೆಯ ವೇಳೆ ತಲೆಮರೆಸಿಕೊಂಡಿದ್ದ ಉಮಾದೇವಿ ಹಾಗೂ ಪುತ್ರ ಲೋಹಿತ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಕೊಲೆಗೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳು ಹೊರಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯ ಕೊಲೆಯ ಹಿಂದೆ ಅಕ್ರಮ ಸಂಬಂಧವೇ ಪ್ರಮುಖ ಕಾರಣವಾಗಿತ್ತೇ? ಈ ಕೃತ್ಯಕ್ಕೆ ಮತ್ತಾರಾದರೂ ಸಾಥ್ ನೀಡಿದ್ದಾರೆಯೇ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಸ್ತೆ ಅಪಘಾತವೆಂದು ಆರಂಭವಾಗಿದ್ದ ಪ್ರಕರಣ ಇದೀಗ ಪತ್ನಿಯೇ ರೂಪಿಸಿದ್ದ ಎನ್ನಲಾದ ಕೊಲೆ ಸಂಚಾಗಿ ತಿರುವು ಪಡೆದುಕೊಂಡಿದ್ದು, ಪೀಲೇರಿಯಲ್ಲಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

Related News

error: Content is protected !!