ಪ್ರಯಾಗ್‌ರಾಜ್: ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಪುರುಷರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಬಳಿಕ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಎನ್ನಲಾದ ಜಾಲವೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ. ಹೈಕೋರ್ಟ್ ವಕೀಲರೊಬ್ಬರು ನೀಡಿದ ದೂರಿನ ಬಳಿಕ ಈ ಪ್ರಕರಣದ ಹಲವು ಅಂಶಗಳು ಬಹಿರಂಗವಾಗಿವೆ.

ಈ ಪ್ರಕರಣದಲ್ಲಿ ಪಲ್ಲವಿ ಸಿಂಗ್ ರಜಪೂತ್ ಎಂಬ ಮಹಿಳೆಯನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ‘ಸ್ವೀಟಿ ತಿವಾರಿ’ ಸೇರಿದಂತೆ ವಿವಿಧ ಹೆಸರುಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಟಿಂಡರ್ ಡೇಟಿಂಗ್ ಆ್ಯಪ್‌ನಲ್ಲಿ ಈಕೆ ಸಕ್ರಿಯವಾಗಿದ್ದಳು ಎನ್ನಲಾಗಿದೆ. ಈಕೆಯೊಂದಿಗೆ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ಕಾರ್ಯನಿರ್ವಹಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪದ ಪ್ರಕಾರ, ಮೊದಲು ಟಿಂಡರ್ ಅಥವಾ ಫೇಸ್‌ಬುಕ್ ಮೂಲಕ ಶ್ರೀಮಂತ ಪುರುಷರನ್ನು ಪರಿಚಯಿಸಿಕೊಳ್ಳುತ್ತಿದ್ದಳು. ಬಳಿಕ ಸ್ನೇಹವನ್ನು ಗಾಢಗೊಳಿಸಿ, ಅವರನ್ನು ನೇರವಾಗಿ ಭೇಟಿಯಾಗುತ್ತಿದ್ದಳು. ಭೇಟಿಯ ವೇಳೆ ಆಪ್ತ ಕ್ಷಣಗಳನ್ನು ರಹಸ್ಯವಾಗಿ ಫೋಟೋ ಅಥವಾ ವಿಡಿಯೋ ಮಾಡಿಕೊಳ್ಳುತ್ತಿದ್ದಳು ಎನ್ನಲಾಗಿದೆ.

ನಂತರ ಇದೇ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಹಣ ನೀಡಲು ನಿರಾಕರಿಸಿದರೆ ಅತ್ಯಾಚಾರ ಅಥವಾ ಕೊಲೆಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಮಾಜದಲ್ಲಿ ಮಾನಹಾನಿಯಾಗುವ ಭಯ ಹಾಗೂ ಪೊಲೀಸ್ ಪ್ರಕರಣ ಮತ್ತು ಜೈಲು ಶಿಕ್ಷೆಯ ಆತಂಕದಿಂದ ಹಲವು ಪುರುಷರು ಲಕ್ಷಾಂತರ ರೂಪಾಯಿ ಹಣ ನೀಡಿದ್ದರು ಎನ್ನಲಾಗಿದೆ. ಈ ಜಾಲದ ಮೂಲಕ ₹6 ಕೋಟಿಗೂ ಅಧಿಕ ಹಣವನ್ನು ಸುಲಿಗೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಆರೋಪಿ ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಕನಿಷ್ಠ ಐವರು ಪುರುಷರು ಜೈಲು ಸೇರಿದ್ದರು ಎನ್ನಲಾಗಿದೆ. ಇದೀಗ ಹೈಕೋರ್ಟ್ ವಕೀಲರ ದೂರಿನ ಬಳಿಕ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಮತ್ತು ಇದುವರೆಗೆ ಎಷ್ಟು ಮಂದಿಯನ್ನು ಬಲೆಗೆ ಬೀಳಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

Related News

error: Content is protected !!