ಬೆಳಗಾವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಸುಮಾರು ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿರುವ ಈ ಘಟನೆ ಇದೀಗ ಗ್ರಾಮದಲ್ಲಿ ಸಂಚಲನ ಮೂಡಿಸಿದೆ.

ಮೃತನನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘು ಅವರ ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ಎನ್ನಲಾದ ರಾಮಾ ರಾಣಗೆ ಅವರನ್ನು ಖಡಕಲಾಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಘು ಕೂಲಿ ಕೆಲಸ ಹಾಗೂ ಕುರಿ ಕಾಯುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಅವರ ಪತ್ನಿ ಬಂಗಾರಿಗೆ, ರಾಘು ಅವರ ಸಂಬಂಧಿಯೇ ಆಗಿರುವ ರಾಮಾ ರಾಣಗೆ ಜೊತೆ ಅಕ್ರಮ ಸಂಬಂಧವಿತ್ತು ಎಂದು ಆರೋಪಿಸಲಾಗಿದೆ.

ಈ ಸಂಬಂಧಕ್ಕೆ ಪತಿ ರಾಘು ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಇಬ್ಬರೂ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸಂಚಿನಂತೆ ಬಂಗಾರಿ ರಾಘುವನ್ನು ಹೊಲಕ್ಕೆ ಕರೆಸಿಕೊಂಡಿದ್ದು, ಅಲ್ಲಿ ರಾಮಾ ರಾಣಗೆ ಜೊತೆ ಸೇರಿ ಆತನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪತಿ ಕುರಿ ಕಾಯಲು ಬೇರೆ ಜಿಲ್ಲೆಗೆ ಹೋಗಿದ್ದಾನೆ ಎಂದು ನಂಬಿಸಿದ ಪತ್ನಿ!

ಕೊಲೆ ಬಳಿಕ ರಾಘು ಅವರ ಮೃತದೇಹವನ್ನು ಅಲ್ಲಿಂದ ಸಾಗಿಸಿ, ಪತಿ ಕುರಿ ಕಾಯುವ ಕೆಲಸಕ್ಕಾಗಿ ಬೇರೆ ಜಿಲ್ಲೆಗೆ ತೆರಳಿದ್ದಾನೆ ಎಂದು ಬಂಗಾರಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ನಂಬಿಸಿದ್ದಳು ಎನ್ನಲಾಗಿದೆ.

ಹೀಗೆ ಬರೋಬ್ಬರಿ ಆರು ತಿಂಗಳು ಕಳೆದರೂ ರಾಘು ಮನೆಗೆ ವಾಪಸ್ ಬಂದಿರಲಿಲ್ಲ. ಪತ್ನಿ ನೀಡುತ್ತಿದ್ದ ಮಾಹಿತಿಯನ್ನೇ ಕುಟುಂಬಸ್ಥರು ನಂಬಿದ್ದರು. ಆದರೆ ರಾಘು ಅವರ ಸಹೋದರ ಲಗಮಣ್ಣ ಅವರಿಗೆ ಕ್ರಮೇಣ ಅನುಮಾನ ಮೂಡಿದೆ.

ಈ ವಿಚಾರವನ್ನು ಅವರು ಗ್ರಾಮದ ಹಿರಿಯರ ಗಮನಕ್ಕೆ ತಂದಿದ್ದಾರೆ. ಬಳಿಕ ಗ್ರಾಮದ ಹಿರಿಯರು ಬಂಗಾರಿಯನ್ನು ವಿಚಾರಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದ ಸತ್ಯವನ್ನು ಆಕೆ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.

ತಕ್ಷಣ ಲಗಮಣ್ಣ ಅವರು ಖಡಕಲಾಟ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಗಾರಿ ಗಾವಡೆ ಹಾಗೂ ರಾಮಾ ರಾಣಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರು ತಿಂಗಳ ಹಿಂದೆ ನಡೆದಿದ್ದ ಎನ್ನಲಾದ ಕೊಲೆ ಪ್ರಕರಣ ಇದೀಗ ಬಯಲಾಗಿದ್ದು, ಮೃತದೇಹದ ಪತ್ತೆ ಹಾಗೂ ಕೊಲೆಯ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!