ಬೆಂಗಳೂರು: ಕೆಲಸದ ಹುಡುಕಾಟದಲ್ಲಿ ನೇಪಾಳದಿಂದ ಬೆಂಗಳೂರಿಗೆ ಬಂದು ಕೇವಲ 15 ದಿನಗಳಾಗಿದ್ದ ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಜಕ್ಕೂರು ಮುಖ್ಯರಸ್ತೆ ಸಮೀಪ ಗುರುವಾರ ಬೆಳಗ್ಗೆ ಇಬ್ಬರು ಯುವತಿಯರ ಮೃತದೇಹಗಳು ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತರನ್ನು ನೇಪಾಳ ಮೂಲದ ಸಿರ್ಜನಾ (22) ಹಾಗೂ ರೀಟಾ (23) ಎಂದು ಗುರುತಿಸಲಾಗಿದೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಬೆಂಗಳೂರು ಪೊಲೀಸರು ದೃಢಪಡಿಸಿದ್ದಾರೆ.

ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಯುವತಿಯರು

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿರ್ಜನಾ ಮತ್ತು ರೀಟಾ ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರಾಗಿದ್ದರು. ಅಲ್ಲದೆ, ಇಬ್ಬರೂ ಸಂಬಂಧಿಕರೂ ಆಗಿದ್ದರು. ನೇಪಾಳದಲ್ಲಿ ಒಟ್ಟಿಗೆ ಬೆಳೆದಿದ್ದ ಇವರಿಬ್ಬರ ನಡುವಿನ ಆತ್ಮೀಯತೆ ವರ್ಷಗಳು ಕಳೆದಂತೆ ಪ್ರೇಮ ಸಂಬಂಧವಾಗಿ ಮಾರ್ಪಟ್ಟಿತ್ತು ಎನ್ನಲಾಗಿದೆ.

ಇವರಿಬ್ಬರ ಸಂಬಂಧದ ವಿಚಾರ ಕುಟುಂಬಸ್ಥರು ಹಾಗೂ ಸ್ಥಳೀಯರಿಗೆ ತಿಳಿದ ಬಳಿಕ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ. ನೇಪಾಳದಲ್ಲಿದ್ದ ಸಂದರ್ಭದಲ್ಲಿ ಇಬ್ಬರೂ ಸಾಮಾಜಿಕ ಒತ್ತಡ ಹಾಗೂ ಕೆಲವರ ಅಪಹಾಸ್ಯಕ್ಕೂ ಒಳಗಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದು ಕೆಲಸ ಮಾಡಿಕೊಂಡು ಒಟ್ಟಿಗೆ ಜೀವನ ನಡೆಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಸುಮಾರು 15 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಇಬ್ಬರೂ ಗೃಹ ಕೆಲಸ ಮಾಡುವ ಉದ್ದೇಶದಿಂದ ನಗರದಲ್ಲಿ ನೆಲೆಸಿದ್ದರು.

ಆದರೆ ಬೆಂಗಳೂರಿನಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸಿರ್ಜನಾ ಫ್ರೇಸರ್ ಟೌನ್‌ನಲ್ಲಿ ನೆಲೆಸಿದ್ದರೆ, ರೀಟಾ ಜಕ್ಕೂರು ಪ್ರದೇಶದಲ್ಲಿ ವಾಸಿಸುತ್ತಿದ್ದರು. ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಕರ ಮನೆಯಲ್ಲಿ ನಡೆದ ಮಾತುಕತೆ ಬಳಿಕ ದುರಂತ

ಬುಧವಾರ ಸಂಜೆ ಇಬ್ಬರೂ ಜಕ್ಕೂರು ಸಮೀಪದ ಸಂಬಂಧಿಕರೊಬ್ಬರ ಮನೆಗೆ ಊಟಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಕುಟುಂಬಸ್ಥರು ಇಬ್ಬರಿಗೂ ಸೂಕ್ತ ವರರನ್ನು ಹುಡುಕಿ ಮದುವೆ ಮಾಡುವ ಕುರಿತು ಮಾತುಕತೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಾತುಕತೆಯೇ ಇಬ್ಬರಿಗೂ ಮಾನಸಿಕವಾಗಿ ತೀವ್ರ ಒತ್ತಡ ಉಂಟುಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ರೀಟಾ ನಾಪತ್ತೆಯಾಗಿದ್ದರಿಂದ ಆತಂಕ

ರೀಟಾ ಜತೆ ಕೆಲಸ ಮಾಡುತ್ತಿದ್ದ ಹಾಗೂ ಯಲಹಂಕದಲ್ಲಿ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿರುವ ಆಕೆಯ ಸಂಬಂಧಿಕರೊಬ್ಬರು, ಬುಧವಾರ ರಾತ್ರಿ ರೀಟಾ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದರು.

ರೀಟಾಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಆಕೆ ಸ್ನೇಹಿತರು ಅಥವಾ ಸಂಬಂಧಿಕರ ಮನೆಯಲ್ಲಿ ಉಳಿದಿರಬಹುದು ಎಂದು ಭಾವಿಸಿದ್ದರಿಂದ ಆರಂಭದಲ್ಲಿ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಜಕ್ಕೂರು ಮುಖ್ಯರಸ್ತೆ ಸಮೀಪ ಇಬ್ಬರ ಮೃತದೇಹಗಳು ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಮೊಬೈಲ್ ದಾಖಲೆಗಳ ಪರಿಶೀಲನೆ

ಘಟನೆಯ ನಿಖರ ಕಾರಣ ಹಾಗೂ ಆತ್ಮಹತ್ಯೆಗೆ ಮುನ್ನ ನಡೆದ ಬೆಳವಣಿಗೆಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಬ್ಬರ ಮೊಬೈಲ್ ಕರೆ ದಾಖಲೆಗಳು, ಸಂದೇಶಗಳು, ಸಂಬಂಧಿಕರು ಹಾಗೂ ಪರಿಚಿತರ ಹೇಳಿಕೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇಬ್ಬರು ಯುವತಿಯರು ಬೆಂಗಳೂರಿಗೆ ಬಂದ ಕೇವಲ 15 ದಿನಗಳಲ್ಲೇ ದುರಂತ ಅಂತ್ಯ ಕಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಕುಟುಂಬದ ವಿರೋಧ, ಸಾಮಾಜಿಕ ಒತ್ತಡ ಹಾಗೂ ಬುಧವಾರ ನಡೆದ ಮದುವೆ ಕುರಿತ ಮಾತುಕತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಆತ್ಮಹತ್ಯೆಗೆ ಕಾರಣವಾದ ನಿಖರ ಸಂಗತಿ ಬಹಿರಂಗವಾಗಲಿದೆ.

Related News

error: Content is protected !!